ಅಭ್ಯಾಸಕ್ಕೆ ಮರಳಲು ನೆಹ್ರಾ ಸ್ಫೂರ್ತಿ: ಝಹೀರ್ ಖಾನ್

ಹೊಸದಿಲ್ಲಿ, ಎ.6: ‘‘ತಾನು ಕ್ರಿಕೆಟ್ ಅಭ್ಯಾಸವನ್ನು ಮರು ಆರಂಭಿಸಲು ನನ್ನ ಮಾಜಿ ಸಹ ಆಟಗಾರ ಆಶೀಷ್ ನೆಹ್ರಾ ಸ್ಫೂರ್ತಿ. 37ರ ಹರೆಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಾಪಸಾಗಿರುವ ನೆಹ್ರಾರ ಪ್ರದರ್ಶನವನ್ನು ನೋಡಿದಾಗ ತಾನು ನಿವೃತ್ತಿಯಾಗಿದ್ದು ತಪ್ಪು ಎಂದು ಪಶ್ಚಾತ್ತಾಪಪಟ್ಟಿಲ್ಲ ’’ ಎಂದು ಭಾರತದ ಮಾಜಿ ವೇಗದ ಬೌಲರ್ ಝಹೀರ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.
‘‘ನನ್ನ ನಿವೃತ್ತಿ ನಿರ್ಧಾರ ಸರಿಯಾಗಿದೆ. ನಾನು ಅದಕ್ಕೆ ಈಗಲೂ ಬದ್ಧವಾಗಿದ್ದೇನೆ. ಆಶೀಷ್ ನೆಹ್ರಾ ಉತ್ತಮ ಪ್ರದರ್ಶನ ನೀಡುತ್ತಿರುವುದನ್ನು ನೋಡಿದಾಗ ಸಂತೋಷವಾಗುತ್ತದೆ. ನಾನು ಅಭ್ಯಾಸವನ್ನು ಮತ್ತೆ ಆರಂಭಿಸಲು ಅವರೇ ಸ್ಫೂರ್ತಿಯಾಗಿದ್ದಾರೆ. ನಾನು ಯಾವುದೇ ಭರವಸೆ ನೀಡಲಾರೆ. ಸರಿಯಾದ ಸ್ಥಳದಲ್ಲಿ ಬೌಲಿಂಗ್ ಮಾಡುವತ್ತ ಚಿತ್ತವಿರಿಸುತ್ತೇನೆ’’ ಎಂದು 37 ರಹರೆಯದ ಝಹೀರ್ ಹೇಳಿದ್ದಾರೆ.
‘‘ಟ್ವೆಂಟಿ-20 ಕ್ರಿಕೆಟ್ ಏಕದಿನ ಕ್ರಿಕೆಟ್‌ಗಿಂತ ಭಿನ್ನ. ಏಕದಿನ ಕ್ರಿಕೆಟ್ ಟೆಸ್ಟ್‌ಗಿಂತ ಭಿನ್ನವಾಗಿದೆ. ಟ್ವೆಂಟಿ-20 ಮಾದರಿಯಲ್ಲಿ ಆಟಗಾರರ ಟ್ವೆಂಟಿ-20 ಪ್ರದರ್ಶನದ ಆಧಾರದಲ್ಲೇ ಅವರ ಸಾಮರ್ಥ್ಯ ಗುರುತಿಸಬೇಕು’’ ಎಂದು ಟೆಸ್ಟ್‌ನಲ್ಲಿ 311 ವಿಕೆಟ್ ಹಾಗೂ ಏಕದಿನದಲ್ಲಿ 282 ವಿಕೆಟ್‌ಗಳನ್ನು ಗಳಿಸಿರುವ ಝಹೀರ್ ತಿಳಿಸಿದರು.





