ಮೂವರಿಗೆ ಜೀವಾವಧಿ, ನಾಲ್ವರಿಗೆ 10 ವರ್ಷ ಜೈಲು 2002, 03 ಮುಂಬೈ ಸ್ಫೋಟ ಪ್ರಕರಣ
ಮುಂಬೈ, ಎ.6: ಕಳೆದ 2002-03ರ ಮುಂಬೈ ಸ್ಫೋಟ ಪ್ರಕರಣದ ಎಲ್ಲ ಅಪರಾಧಿಗಳಿಗೆ ವಿಶೇಷ ಪೋಟಾ ನ್ಯಾಯಾಲಯವೊಂದು ಶಿಕ್ಷೆಯ ಪ್ರಮಾಣವನ್ನು ಘೋಷಿಸಿದ್ದು ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಇವು ಮೊದಲ ಸ್ಫೋಟಗಳಾಗಿವೆ. ನಿಷೇಧಿತ ಸಿಮಿ ಹಾಗೂ ಲಷ್ಕರೆ ತಯ್ಯಿಬಾ ಭಯೋತ್ಪಾದಕ ಸಂಘಟನೆಯ ಸದಸ್ಯರು ನಗರದಲ್ಲಿ ಸರಣಿ ಸ್ಫೋಟಗಳನ್ನು ನಡೆಸುವ ಸಂಚು ರೂಪಿಸಿದ್ದರು.
ಬಾಂಬ್ ಇರಿಸಿದ್ದ ಮುಝಾಮ್ಮಿಲ್ ಅನ್ಸಾರಿ, ವಾಹಿದ್ ಅನ್ಸಾರಿ ಹಾಗೂ ಫರ್ಹಾನ್ ಖೋತ್ ಎಂಬವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಪ್ರಧಾನ ಆರೋಪಿಯೆಂದು ಪ್ರಾಸಿಕ್ಯೂಶನ್ ಪ್ರತಿಪಾದಿಸಿದ್ದ, ಸಿಮಿಯ ಮಾಜಿ ಪ್ರಧಾನ ಕಾರ್ಯದರ್ಶಿ ಸಾಕಿಬ್ ನಾಚನ್, ಅತೀಫ್ ಮುಲ್ಲಾ, ಹಸೀಬ್ ಮುಲ್ಲಾ ಹಾಗೂ ಗುಲಾಂ ಖೋಟಲ್ ಎಂಬವರಿಗೆ ತಲಾ 10 ವರ್ಷಗಳ ಶಿಕ್ಷೆ ನೀಡಲಾಗಿದೆ.
ನೂರ್ ಮಲಿಕ್, ಅನ್ವರ್ ಅಲಿ ಹಾಗೂ ಮುಹಮ್ಮದ್ ಕಾಮಿಲ್ ಎಂಬವರು ತಲಾ 2 ವರ್ಷ ಕಾರಾಗೃಹದಲ್ಲಿ ಕಳೆಯ ಬೇಕಾಗಿದೆ.
ಪ್ರಕರಣದ ವಿಚಾರಣೆ 13 ವರ್ಷಗಳಿಂದ ನಡೆಯುತ್ತಿದೆ. ತಾನು ಪ್ರಾಸಿಕ್ಯೂಶನ್ ಹಾಗೂ ಪ್ರತಿವಾದಿಗಳ ಕಡೆಯ ಸಾಕ್ಷಿಗಳೆಲ್ಲವನ್ನೂ ಪರಿಗಣಿಸಿದ್ದೇನೆ. ಇದು ವಿಚಾರಣಾ ನ್ಯಾಯಾಲಯವಾಗಿದ್ದು, ಅಂತಿಮ ನ್ಯಾಯಾಲಯವಲ್ಲ. ತೀರ್ಪಿನಿಂದ ಕೆಲವರಿಗೆ ಸಂತೋಷವಾಗಿರಬಹುದು ಹಾಗೂ ನ್ಯಾಯಾಧೀಶ ಪಿ.ಆರ್.ದೇಶಮುಖ್ ತೀರ್ಪು ನೀಡುವ ವೇಳೆ ಹೇಳಿದರು.
ನಗರವನ್ನು ನಡುಗಿಸಿದ್ದ ಮೂರು ಸ್ಫೋಟಗಳು ನಡೆದು 13 ವರ್ಷಗಳ ಬಳಿಕ ಪ್ರಕರಣದ ತೀರ್ಪು ಘೋಷಿಸಲಾಗಿದೆ. ಅದ್ನಾನ್ ಮುಲ್ಲಾ, ಹಾರೂನ್ ಲೋಹರ್ ಹಾಗೂ ನದೀಂ ಪಲೋಬಾ ಎಂಬ ಮೂವರು ಆರೋಪಿಗಳನ್ನು ಸಾಕ್ಷಗಳ ಅಭಾವದಿಂದಾಗಿ ಖುಲಾಸೆ ಮಾಡಲಾಗಿದೆ.
2002ರ ಡಿಸೆಂಬರ್‌ನಿಂದ 2003ರ ಮಾರ್ಚ್‌ವರೆಗೆ ಸಂಭವಿಸಿದ್ದ ಮೂರು ಸ್ಫೋಟಗಳಲ್ಲಿ 90ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದು, 139 ಮಂದಿ ಗಾಯಗೊಂಡಿದ್ದರು.
ಪ್ರಕರಣದಲ್ಲಿ ಒಟ್ಟು 254 ಮಂದಿ ಆರೋಪಿಗಳಿದ್ದರು. ಎನ್‌ಕೌಂಟರೊಂದಕ್ಕೆ ಬಲಿಯಾದ ಪಾಕಿಸ್ತಾನಿ ಪ್ರಜೆ ಲಷ್ಕರ್ ಸದಸ್ಯ ಪೈಸಲ್ ಖಾನ್ ಎಂಬಾತನ ಸಹಿತ ಐವರು ಆರೋಪಿಗಳು ವಿಚಾರಣಾ ಸಮಯದಲ್ಲಿ ಮೃತರಾಗಿದ್ದರೆ, ಇತರ 6 ಮಂದಿ ಇನ್ನೂ ತಲೆ ಮರೆಸಿಕೊಂಡಿದ್ದಾರೆ.
2002ರ ಡಿ.6ರಂದು ಮುಂಬೈ ಸೆಂಟ್ರಲ್ ರೈಲ್ವೆ ನಿಲ್ದಾಣದ ಮೆಕ್‌ಡೊನಾಲ್ಡ್ ಅಂಗಡಿಯ ಬಳಿ ಸಂಭವಿಸಿದ ಸ್ಫೋಟದಲ್ಲಿ 27 ಮಂದಿ ಗಾಯಗೊಂಡಿದ್ದರು. 2003ರ ಜ.27ರಂದು ವಿಲೆ ಪಾರ್ಲೆ ರೈಲು ನಿಲ್ದಾಣದ ಹೊರಗೆ ಸೈಕಲೊಂದರಲ್ಲಿರಿಸಿದ್ದ ಬಾಂಬ್ ಸ್ಫೋಟಗೊಂಡು ಅನಿತಾ ಇಂದುಲ್ಕರ್ (35) ಎಂಬವರು ಮೃತ ಪಟ್ಟು, ಇತರ 32 ಮಂದಿಗೆ ಗಾಯಗಳಾಗಿದ್ದವು. 2003ರ ಮಾ.13ರಂದು ಕರ್ಜತ್‌ಗೆ ಹೋಗುತ್ತಿದ್ದ ರೈಲಿನ ಮಹಿಳಾ ಬೋಗಿಯಲ್ಲಿ ಬಾಂಬ್ ಸ್ಫೋಟಿಸಿ 90ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರು.





