ಅಲೆಪ್ಪೊ ನಗರದಲ್ಲಿ ಸಿರಿಯ ಸೇನೆಯ ಭೀಕರ ದಾಳಿ
ಬೆರೂತ್, ಎ. 6: ಸಿರಿಯ ಸೇನೆ ಮತ್ತು ಅದರ ಮಿತ್ರಪಕ್ಷಗಳು ಮಂಗಳವಾರ ರಾತ್ರಿ ಅಲೆಪ್ಪೊ ನಗರದ ದಕ್ಷಿಣದಲ್ಲಿ ಬಂಡುಕೋರರ ಮೇಲೆ ಭೀಕರ ದಾಳಿ ನಡೆಸಿವೆ. ಇದು ಫೆಬ್ರವರಿಯಲ್ಲಿ ತಾತ್ಕಾಲಿಕ ಯುದ್ಧವಿರಾಮ ಜಾರಿಗೆ ಬಂದಂದಿನಿಂದ ಈ ಪ್ರದೇಶದಲ್ಲಿ ಸರಕಾರಿ ಪಡೆಗಳು ನಡೆಸಿದ ಅತ್ಯಂತ ಭೀಕರ ದಾಳಿಯಾಗಿದೆ ಎಂಬುದಾಗಿ ಬಣ್ಣಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಬಂಡುಕೋರರು ವಶಪಡಿಸಿಕೊಂಡ ತೆಲತ್ ಅಲ್-ಈಸ್ ಪಟ್ಟಣವನ್ನು ವಶಪಡಿಸಿಕೊಳ್ಳುವುದಕ್ಕಾಗಿ ದಾಳಿಯನ್ನು ನಡೆಸಲಾಗಿದೆ ಹಾಗೂ ದಾಳಿಯಲ್ಲಿ ರಾಕೆಟ್‌ಗಳು ಮತ್ತು ಫಿರಂಗಿಗಳನ್ನು ಬಳಸಲಾಗಿದೆ ಹಾಗೂ ವಾಯು ದಾಳಿಯನ್ನೂ ನಡೆಸಲಾಗಿದೆ ಎಂದು ಬ್ರಿಟನ್‌ನಲ್ಲಿ ನೆಲೆ ಹೊಂದಿರುವ ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ ಹೇಳಿದೆ.
ಅಲ್-ಖಾಯಿದ ಜೊತೆ ನಂಟು ಹೊಂದಿರುವ ನುಸ್ರ ಫ್ರಂಟ್ ಮಂಗಳವಾರ ಸಿರಿಯದ ಯುದ್ಧವಿಮಾನವೊಂದನ್ನು ಹೊಡೆದುರುಳಿಸಿದೆ ಹಾಗೂ ಅದರ ಪೈಲಟ್‌ನನ್ನು ಸೆರೆಹಿಡಿದಿದೆ.
ಆದಾಗ್ಯೂ, ಸಿರಿಯ ಪಡೆಗಳು ಮತ್ತು ಅದರ ಮಿತ್ರಪಕ್ಷಗಳ ದಾಳಿಯನ್ನು ಹಿಮ್ಮೆಟ್ಟಿಸಲಾಗಿದೆ ಎಂದು ಬಂಡುಕೋರ ನಾಯಕರೊಬ್ಬರು ಹೇಳಿದ್ದಾರೆ. ಸರಕಾರಿ ಪಡೆಗಳೊಂದಿಗೆ ಯುದ್ಧ ಮಾಡಿರುವ ಶಿಯಾ ಹೋರಾಟಗಾರರು ಭಾರೀ ಸಾವುನೋವು ಅನುಭವಿಸಿದ್ದಾರೆ ಎಂದರು.





