ಗೂಢಚರ್ಯ ಆರೋಪ: ಕೇರಳ ಮೂಲದ ಮೂವರಿಗೆ ಯುಎಇನಲ್ಲಿ ಜೈಲು
ಕೊಚ್ಚಿ, ಎ.6: ತವರು ದೇಶಕ್ಕೆ ಗೂಢಚರ್ಯೆ ನಡೆಸುತ್ತಿದ್ದ ಆರೋಪದ ಮೇರೆಗೆ ಮೂವರು ಕೇರಳೀಯರು ಸೇರಿದಂತೆ ಐದು ಮಂದಿಯನ್ನು ಯುಎಇ ಜೈಲಿಗೆ ತಳ್ಳಿದೆ. ಆದರೆ ಅವರ ಸಂಬಂಧಿಗಳು ಹೇಳುವಂತೆ ಅಬುಧಾಬಿಯಲ್ಲಿರುವ ಭಾರತೀಯ ದೂತಾವಾಸದ ಅಧಿಕಾರಿಗಳ ವಂಚನಾ ಜಾಲಕ್ಕೆ ಅವರೆಲ್ಲ ಬಲಿಯಾಗಿದ್ದಾರೆ.
ಯುಎಇನಲ್ಲಿರುವ ಭಾರತೀಯ ದೂತಾವಾಸದ ಇಬ್ಬರು ಅಧಿಕಾರಿಗಳು, ಯುಎಇ ಮೀನಾ ಬಂದರಿನಲ್ಲಿ ಹಡಗುಗಳ ಚಲನವಲನಗಳಿಗೆ ಸಂಬಂಧಿಸಿದ ಪ್ರಮುಖ ಮಾಹಿತಿಗಳನ್ನು ರವಾನಿಸುವಂತೆ ಅಲ್ಲಿ ಕೆಲಸ ಮಾಡುವ ಭಾರತೀಯರಿಗೆ ಒತ್ತಡ ತಂದಿದ್ದರು. ಜೈಲಿನಲ್ಲಿರುವ ಐದು ಮಂದಿ ಸಂಬಂಧಿಕರ ಜತೆ ಮಾತುಕತೆ ನಡೆಸಲು ಭಾರತದ ವಿದೇಶಾಂಗ ಸಚಿವಾಲಯ ಈ ತಿಂಗಳ 13ರಂದು ಸಭೆ ಕರೆದು ಘಟನೆಯ ವಿವರ ಪಡೆಯಲಿದೆ. ಸಿಕ್ಕಿಹಾಕಿಕೊಂಡ ಮೂವರು ಮಲೆಯಾಳಿಗಳೆಂದರೆ ಎರ್ನಾಕುಳಂನ ಮುವತ್ತುಪುಳದ ಮುಹಮ್ಮದ್ ಇಬ್ರಾಹೀಂ (42), ಮಲಪ್ಪುರಂನ ಮನರ್ತಾಡಿ ಅಬ್ಬಾಸ್ (46) ಹಾಗೂ ತಿರುವನಂತಪುರದ ಶೀಹಾನಿ.
ಮುಹಮ್ಮದ್ ಅವರು ಬಂದರು ಸಂಚಾಲಕರಾಗಿ ಹಾಗೂ ಅಬ್ಬಾಸ್ ಅವರು ಬಾಸಿನ್ ಸುಪರ್‌ವೈಸರ್ ಆಗಿ ಮೀನಾ ಬಂದರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮುಹಮ್ಮದ್ 10 ವರ್ಷ ಜೈಲು ಶಿಕ್ಷೆ ಮತ್ತು ಹತ್ತು ಲಕ್ಷ ದಿನಾರ್ ದಂಡ ಶಿಕ್ಷೆಗೆ ಗುರಿಯಾಗಿದ್ದರೆ, ಅಬ್ಬಾಸ್ ಐದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಶೀಹಾನಿ ಶಿಕ್ಷೆ ಘೋಷಣೆಯಾಗಬೇಕಿದೆ.





