ಆರೋಪಿಗೆ ಜಾಮೀನು ನಿರಾಕರಣೆ
ಚಿನ್ನಸ್ವಾಮಿ ಬಾಂಬ್ ಸ್ಫೋಟ ಪ್ರಕರಣ
ಬೆಂಗಳೂರು, ಎ.6: ಚಿನ್ನಸ್ವಾಮಿ ಸ್ಟೇಡಿಯಂ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿಸಲಾಗಿದ್ದ ಆರೋಪಿಗೆ ಹೈಕೋರ್ಟ್ ಜಾಮೀನು ನಿರಾಕರಿಸಿದೆ.
ಈ ಸಂಬಂಧ ಫಾಝಿಲ್ ಮುಹಮ್ಮದ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ಅವರಿದ್ದ ನ್ಯಾಯಪೀಠ. ಈ ಆದೇಶ ನೀಡಿದೆ.
ಚಿನ್ನಸ್ವಾಮಿ ಸ್ಟೇಡಿಯಂ ಬಾಂಬ್ ಸ್ಫೋಟ ಪ್ರಕರಣದಲ್ಲಿ ಫಾಝಿಲ್ ಮುಹಮ್ಮದ್‌ನ ಕೈವಾಡವಿಲ್ಲವಾಗಿದ್ದರಿಂದ ಈತನಿಗೆ ಜಾಮೀನು ನೀಡಬೇಕೆಂದು ಅರ್ಜಿದಾರರ ಪರ ವಕೀಲ ನ್ಯಾಯಪೀಠಕ್ಕೆ ತಿಳಿಸಿದರು.
ದೋಷಾರೋಪಪಟ್ಟಿ ಈಗಾಗಲೇ ತಯಾರಾಗಿದ್ದು, ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಹೀಗಾಗಿ, ಈತನಿಗೆ ಜಾಮೀನನ್ನು ನಿರಾಕರಿಸಬೇಕೆಂದು ಸರಕಾರಿ ಪರ ವಕೀಲ ನ್ಯಾಯಪೀಠಕ್ಕೆ ತಿಳಿಸಿದರು. ನ್ಯಾಯಪೀಠ ವಕೀಲರ ವಾದ ಪ್ರತಿವಾದವನ್ನು ಆಲಿಸಿ ಮೂರು ತಿಂಗಳಲ್ಲಿ ದೋಷಾರೋಪ ಹೊರಿಸಿ ವಿಚಾರಣೆ ಆರಂಭಿಸಲು ಆದೇಶ ಹೊರಡಿಸಿತು.
ಬಂಧಿತ ಆರೋಪಿಯನ್ನು ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸಿಪಿ ಮತ್ತು ಸಿಸಿಬಿ ಅವರು 2012ರ ಮೇ 13ರಂದು ಸೌದಿ ಅರೇಬಿಯಾದಲ್ಲಿ ಬಂಧಿಸಿ ವಿಚಾರಣೆಗಾಗಿ ಕರ್ನಾಟಕಕ್ಕೆ ಕರೆ ತರಲಾಗಿತ್ತು. 2010ರ ಎ.17ರಂದು ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದ ಆರಂಭಕ್ಕೂ ಮುನ್ನ ಮೈದಾನದ ಹೊರಗೆ ಎರಡು ಸ್ಫೋಟಗಳು ಸಂಭವಿಸಿದ್ದವು. ಆ ಮೇಲೆ ಕ್ರೀಡಾಂಗಣದ ಸುತ್ತ ಅನೇಕ ಸಜೀವ ಬಾಂಬ್ಗಳು ಸಹ ಪತ್ತೆಯಾಗಿದ್ದವು.





