ಸಂಘ ಪರಿವಾರದ ಗಾಳಕ್ಕೆ ಸಿಲುಕುತ್ತಿರುವ ದಲಿತರು
ಮಾನ್ಯರೆ, ಸಂಘ ಪರಿವಾರದವರು ದಿನಕ್ಕೊಂದು ಹೊಸ ಪ್ರಚೋದನಾಕಾರಿ ಹೇಳಿಕೆ ನೀಡಿ ದಲಿತರನ್ನು ಮತ್ತು ಅಲ್ಪಸಂಖ್ಯಾತರನ್ನು ಅವಮಾನಿಸುತ್ತಲೇ ಇರುತ್ತಾರೆ. ಆದರೆ ದಲಿತ ಸಂಘಟನೆಗಳು ಬಾಯಿ ಮುಚ್ಚಿ ಕುಳಿತಿವೆ. ವಿಪರ್ಯಾಸವೆಂದರೆ ನಮ್ಮ ಕರ್ನಾಟಕದಲ್ಲಿ ಮನುವಾದಿ ಸಂಘ ಪರಿವಾರದೊಳಗೂ ಒಂದು ದಲಿತರ ಅಂಗ ಸಂಸ್ಥೆ ಹುಟ್ಟಿಕೊಂಡಿದೆ. ಹಿಂದೂ ಮಹಾಸಭಾದಂತೆ ಅದಕ್ಕೆ ದಲಿತ ಮಹಾಸಭಾ ಎಂದು ಹೆಸರಿಡಲಾಗಿದೆ. ಕೆಲವು ಸಮಯ ಸಾಧಕ ದಲಿತರು ಮನುವಾದಿಗಳೊಂದಿಗೆ ಕೈ ಜೋಡಿಸಿ ಮನುವಾದದ ಬದ್ಧ ವೈರಿಯಾದ ಡಾ.ಅಂಬೇಡ್ಕರರಿಗೇ ನೇರ ಅವಮಾನ ಮಾಡುತ್ತಿದ್ದಾರೆ. ನಿನ್ನೆ ಲಕ್ನೋದಲ್ಲಿ ಯುಪಿಯ ಮಹಿಳಾ ಮೋರ್ಚಾದ ನಾಯಕಿ ಮಧು ಮಿಶ್ರಾ ಎಂಬ ತಲೆತಿರುಕಿ ಹೇಳಿದ್ದೇನು ಗೊತ್ತೇ? "ಇಂದು ಸಂವಿಧಾನದ ನೆರವಿನೊಂದಿಗೆ ನಮ್ಮನ್ನು ಆಳುತ್ತಿರುವವರು ಹಿಂದೊಮ್ಮೆ ನಮ್ಮ ಚಪ್ಪಲಿಯನ್ನು ಶುಚಿಗೊಳಿಸುತ್ತಿದ್ದರು. ಒಂದು ಕಾಲದಲ್ಲಿ ನಾವು ಈ ಜನರ ನೆರಳು ಸಹ ನಮ್ಮ ಮೇಲೆ ಬಿದ್ದರೂ ಸಹಿಸುತ್ತಿರಲಿಲ್ಲ. ಆದರೂ ಮುಂದೊಂದು ದಿನ ನಮ್ಮ ಮಕ್ಕಳು ಇವರನ್ನು ಜೀ ಹುಝೂರ್ ಎಂದು ಕರೆಯಬೇಕಾಗಬಹುದು. ಹಾಗಾಗಿ ದಲಿತರಂತಹ ಹಿಂದುಳಿದವರ ಅಭಿವೃದ್ಧಿಯ ವಿರುದ್ಧ ನಾವು ಸವರ್ಣೀಯರು ಯುದ್ಧ ಸಾರಬೇಕಾಗಿದೆ" ಎಂಬ ಅಣಿಮುತ್ತುಗಳನ್ನು ಈ ಮನುವಾದಿ ಮಹಿಳೆ ಉದುರಿಸಿದಳು. ಕೇವಲ ಬಾಯಿ-ನಾಲಿಗೆ-ಗಂಟಲು ಮಾತ್ರ ಈ ಮೂರ್ಖ "ಮಧು" ವಿಷ ಮಿಶ್ರಾಳದ್ದು, ಆದರೆ ಮೆದುಳು ಸಂಘ ಪರಿವಾರದ್ದು. ಅಂದರೆ ಅವಳು ಹೇಳಿದ್ದು ನಾಗಪುರ ಹೆಡ್ ಆಫೀಸಿನವರ ಮನದಾಳದ ಮಾತು. ಕಾಫೀ ಫಿಲ್ಟರ್ ನಂತಹ ಮೀಸೆ ಇರುವ "ಮನು" ಭಾಗವತನ ಹೃದಯದ ಮಾತಿದು. ಚಪ್ಪಲಿ ಶುಚಿಗೊಳಿಸುತ್ತಿದ್ದವರು ದೇಶ ಆಳುವುದು ತಪ್ಪಾದರೆ ಲೈಸೆನ್ಸ್ ಇಲ್ಲದೆ ರೈಲಿನಲ್ಲಿ ಚಹಾ ಮಾರುತ್ತಿದ್ದವನೂ ದೇಶ ಆಳುವುದು ತಪ್ಪುಲ್ಲವೆ? ಮೇಲಾಗಿ ನರೇಂದ್ರ ಮೋದಿ ಹಿಂದುಳಿದ ಗಾಣಿಗ ಜಾತಿಯವರು. ಗುಜರಾತ್‌ನಲ್ಲಿ ಬ್ರಾಹ್ಮಣರು, ಜೈನರು ಮತ್ತು ವೈಶ್ಯರು ಈಗಲೂ ಗಾಣಿಗರ ಮನೆಯಲ್ಲಿ ನೀರು ಕುಡಿಯುವುದಿಲ್ಲ. ಬಾಬಾ ರಾಮ್ ದೇವ್ ಹಿಂದುಳಿದ ಯಾದವ ಜಾತಿಯವರು. ಉತ್ತರ ಪ್ರದೇಶದ ಮೇಲ್ಜಾತಿಯವರು ಈಗಲೂ ಯಾದವ ಜಾತಿಯವರ ಮನೆಯಲ್ಲಿ ನೀರು ಕುಡಿಯುವುದಿಲ್ಲ. ಆದರೂ ಈತ ವೈದಿಕ ಪರಶುರಾಮನ ಮರಿಯಂತೆ ಭಾರತ್ ಮಾತಾಕಿ ಜೈ ಅನ್ನದ ಲಕ್ಷಾಂತರ ಮಂದಿಯ ತಲೆ ಕಡಿಯುತಾರಂತೆ. ಎಂತಹ ರಕ್ತಪಿಪಾಸುಗಳ ಗುಂಪು ಈಗ ನಮ್ಮ ದೇಶದ ಮೇಲೆ ಹತೋಟಿ ಸಾಧಿಸಿದೆ ನೋಡಿ. ಹಾಸನ ಜಿಲ್ಲೆಯ ಸಿಗರನಹಳ್ಳಿಯಲ್ಲಿ ದಲಿತರ ದೇವಸ್ಥಾನ ಪ್ರವೇಶವನ್ನು ಮೇಲ್ಜಾತಿಯವರು ನಿಷೇಧಿಸಿದರು. ಮಂಡ್ಯದಲ್ಲಿ ದಲಿತ ಹುಡುಗನನ್ನು ಮದುವೆಯಾದ ಮೇಲ್ಜಾತಿಯ ಹುಡುಗಿಯ ಮರ್ಯಾದಾ ಹತ್ಯೆ ಮಾಡಿ ಅದನ್ನು ಆತ್ಮಹತ್ಯೆ ಎಂಬುದಾಗಿ ಬಿಂಬಿಸಲಾಯಿತು. ತಮಿಳುನಾಡಿನಲ್ಲಿ ದಲಿತ ಇಂಜಿನಿಯರ್ ಹುಡುಗ ಮೇಲ್ಜಾತಿ ಹುಡುಗಿಯನ್ನು ಪ್ರೇಮಿಸಿ ಮದುವೆಯಾದುದಕ್ಕ್ಕಾಗಿ ಅವನನ್ನು ನಡುಬೀದಿಯಲ್ಲಿ ಕೊಚ್ಚಿ ಕೊಲ್ಲಲಾಯಿತು. ಕರ್ನಾಟಕದ ಮುಜರಾಯಿ ಇಲಾಖೆಗೂ ಮೀಸಲಾತಿ ನೀತಿ ಅನ್ವಯ ಆಗುತ್ತಿದ್ದರೂ ಕರಾವಳಿಯಲ್ಲಿ ದಲಿತ ಸರಕಾರಿ ಅಧಿಕಾರಿಯನ್ನು ಯಾವುದೇ ವೈದಿಕ ದೇವಸ್ಥಾನದಲ್ಲಿ ಆಡಳಿತಾಧಿಕಾರಿಯಾಗಿ ನೇಮಿಸುತ್ತಿಲ್ಲ. ದೇವಸ್ಥಾನದಲ್ಲಿಯ ಇತರ ನೌಕರಿಯಲ್ಲೂ ಮೀಸಲಾತಿ ನೀತಿ ಅನುಸರಿಸುತ್ತಿಲ್ಲ. ದೇವಸ್ಥಾನದ ಕಸಗುಡಿಸುವುದಕ್ಕೂ ಬ್ರಾಹ್ಮಣರೇ ಬೇಕು. ಕೇವಲ ಕೆನೆಪದರಿನ ಒಂದಷ್ಟು ದಲಿತರಿಗೆ ಸರಕಾರಿ ನೌಕರಿ ಸಿಕ್ಕ ಕೂಡಲೇ ಇಡೀ ದಲಿತ ಜನಾಂಗದ ಉದ್ಧಾರ ಆಗುವುದಿಲ್ಲ. ಭಾರತದ ಪ್ರತಿಯೊಂದು ರಾಜ್ಯದಲ್ಲೂ ದಲಿತರ ಜೀವನ ದಿನೇ ದಿನೇ ದುರ್ಭರ ಆಗುತ್ತಾ ಹೋಗುತ್ತಿರುವಾಗ ದಲಿತರು ಭಾರತ್ ಮಾತಾ ಕಿ ಜೈ (ಜೈಲ್ ?) ಎನ್ನ ಬೇಕಂತೆ. ಇವತ್ತು ಡಾ.ಅಂಬೇಡ್ಕರರು ಇದ್ದಿದ್ದರೆ ಖಂಡಿತಾ ಅವರು ಭಾರತೀಯನಾಗಿ ಹುಟ್ಟಿದ್ದೇನೆ ಆದರೆ ಭಾರತೀಯನಾಗಿ ಸಾಯಲಾರೆ ಎಂದೂ ಹೇಳುತ್ತಿದ್ದರೇನೋ!.





