ನಮ್ಮ ಪಕ್ಷವಿಲ್ಲದೆ ಈ ಬಾರಿ ಅಸ್ಸಾಂನಲ್ಲಿ ಸರಕಾರ ರಚನೆ ಅಸಾಧ್ಯ: ಬದ್ರುದ್ದೀನ್ ಅಜ್ಮಲ್
ಗುವಾಹಟಿ : "ಮುಸ್ಲಿಮರ ಮುಖಚರ್ಯೆಯನ್ನು ನೋಡಿ ಅವರನ್ನು ಸಂಶಯದ ದೃಷ್ಟಿಯಿಂದ ನೋಡಲಾಗುತ್ತಿದೆ. ಬಾಂಗ್ಲಾದೇಶಿಗಳು ದೇಶದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಿ. ಆಗತ್ಯ ಬಿದ್ದರೆ ಗುಂಡಿಕ್ಕಿ. ಆದರೆ ನಿಜವಾದ ಭಾರತದ ನಾಗರಿಕರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಿ''ಎಂದು ಹೇಳುತ್ತಾರೆ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಾಟಿಕ್ ಪಕ್ಷದ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್.
ಹಿಂದುಸ್ತಾನ್ ಟೈಮ್ಸ್ ಪತ್ರಿಕೆಗೆ ನೀಡಿದ ಸಂದರ್ಶನ ವೊಂದರಲ್ಲಿ ಮಾತನಾಡಿದ ಅವರು 1985ರ ಅಸ್ಸಾಂ ಒಪ್ಪಂದದಂತೆ ಮಾರ್ಚ್ 24,1971ರ ನಂತರ ಭಾರತಕ್ಕೆ ಬಂದಿರುವ ಅಕ್ರಮ ವಲಸಿಗರು ದೇಶ ತೊರೆಯಬೇಕು. ಬಾಂಗ್ಲಾದೇಶದೊಂದಿಗಿನ ಗಡಿಯನ್ನು ಸೀಲ್ ಮಾಡಲು ಸರಕಾರವನ್ನು ಏನು ತಡೆಯುತ್ತಿದೆ? ಎಂದವರು ಪ್ರಶ್ನಿಸಿದರು. ನೀವು ಬಾಂಗ್ಲಾದೇಶೀ ವಲಸಿಗರ ಪರವಾಗಿದ್ದೀರೆಂಬ ಆಪಾದನೆಗಳಿವೆಯಲ್ಲ ಎಂದು ಪ್ರಶ್ನಿಸಿದಾಗ ಇದು ಬಿಜೆಪಿ ಹಾಗೂ ಅಸ್ಸಾಂ ಗಣ ಪರಿಷದ್ ಪಕ್ಷದ ಆಧಾರರಹಿತ ಆರೋಪವೆಂದು ಅಜ್ಮಲ್ ನುಡಿದರು. ತಮ್ಮ ಪಕ್ಷದ ಅಭ್ಯರ್ಥಿಗಳ ಹಿನ್ನೆಲೆಯನ್ನು ಪರೀಕ್ಷಿಸಿದರೆ ಪಕ್ಷವೆಷ್ಟು ಜಾತ್ಯತೀತವೆಂದು ತಿಳಿಯುತ್ತದೆ, ಎಂದೂ ಅವರು ಹೇಳಿದರು. ಮುಂದಿನ ಚುನಾವಣೆಯ ನಂತರ ಅಸ್ಸಾಂನಲ್ಲಿ ಅತಂತ್ರ ವಿಧಾನಸಭೆಯಿರುವುದೆಂದು ಭವಿಷ್ಯ ನುಡಿದ ಅವರು ರಾಜ್ಯದಲ್ಲಿ ಯಾವ ಪಕ್ಷ ಕೂಡ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರೆಟಿಕ್ ಪಕ್ಷದ ಸಹಾಯವಿಲ್ಲದೆ ಸರಕಾರ ರಚಿಸಲು ಸಾಧ್ಯವಿಲ್ಲವೆಂದಿದ್ದಾರೆ.





