ಬೆಂವಿವಿ ಕುಲಪತಿಗೆ ತೊಂದರೆ ತಪ್ಪಿದ್ದಲ್ಲ: ಡಾ.ಎಲ್.ಹನುಮಂತಯ್ಯ
ಬೆಂಗಳೂರು, ಎ.6: ಬೆಂಗಳೂರು ವಿಶ್ವವಿದ್ಯಾನಿಲಯಕ್ಕೆ ಯಾರೇ ಕುಲಪತಿಗಳಾಗಿ ನೇಮಕಗೊಂಡರೂ ತೊಂದರೆ ತಪ್ಪಿದ್ದಲ್ಲ. ಎಲ್ಲವನ್ನು ಚಾಕಚಕ್ಯತೆಯಿಂದ ನಿಭಾಯಿಸಿಯೇ ಕಾರ್ಯನಿರ್ವಹಿಸಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾಎಲ್.ಹುನುಮಂತಯ್ಯ ಆತಂಕ ವ್ಯಕ್ತಪಡಿಸಿದರು.
ನಗರದ ಜ್ಞಾನಭಾರತಿ ಪ್ರೊ.ಕೆ.ವೆಂಕಟಗಿರಿಗೌಡ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕುಲಸಚಿವರಾದ ಪ್ರೊ.ಕೆ.ಕೆ. ಸೀತಮ್ಮನವರಿಗೆ ‘ಅಭಿನಂದನಾ ಸಮಾರಂಭ’ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬೆಂವಿವಿ ವಿಶ್ವವಿದ್ಯಾನಿಲಯದಲ್ಲಿ ಆಡಳಿತ ನಡೆಸಿದ ಬಹುತೇಕ ಕುಲಪತಿಗಳು ಸರಳ ಸಜ್ಜನಿಕೆಗೆ ಹೆಸರಾದವರು. ಆದರೆ, ಅವರೆಲ್ಲರಿಗೂ ಭ್ರಷ್ಟರು, ಸ್ವಾರ್ಥಿಗಳು ನಿರಂತರವಾಗಿ ಕಿರುಕುಳ ನೀಡಿದ್ದಾರೆ. ಅದು ಇಂದಿಗೂ ಮುಂದುವರಿದಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ನಮ್ಮ ದೇಶದಲ್ಲಿ ಇಂದಿಗೂ ಉನ್ನತ ಶಿಕ್ಷಣವು ಆಕರ್ಷಣೀಯವಾದ ಕ್ಷೇತ್ರವಾಗಿಲ್ಲ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಶೇ.25ರಷ್ಟು ಮಂದಿ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುತ್ತಾರೆ. ಆದರೆ, ಭಾರತದಲ್ಲಿ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುವ ಸಂಖ್ಯೆ ಕೇವಲ ಶೇ.6ರಿಂದ 7ರಷ್ಟಿದೆ. ಇದನ್ನು ಕನಿಷ್ಠ ಶೇ.15ಕ್ಕೆ ಏರಿಸಬೇಕೆನ್ನುವ ನಿಟ್ಟಿನಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ವಿವಿಗಳ ಶೈಕ್ಷಣಿಕ ಅರ್ಹತೆ ಕಾಪಾಡುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯ ನಿರ್ವಹಿಸಬೇಕಿದೆ. ಸರಕಾರ ಬೆಂ. ವಿಶ್ವವಿದ್ಯಾನಿಲಯವನ್ನು ವಿಭಾಗಿಸುವ ಮೂಲಕ ಪರಿಣಾಮಕಾರಿ ಬೋಧನೆಗೆ ಹೆಚ್ಚಿನ ಒತ್ತು ನೀಡಬೇಕು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ನಿಟ್ಟಿನಲ್ಲಿ ಕಾರ್ಯಯೋಜನೆಗಳನ್ನು ರೂಪಿಸಬೇಕು ಎಂದು ಡಾ.ಎಲ್.ಹನುಮಂತಯ್ಯ ಆಶಿಸಿದರು.
ಅಭಿನಂದನೆ ಸ್ವೀಕರಿಸಿದ ಕುಲಸಚಿವೆ ಕೆ.ಕೆ.ಸೀತಮ್ಮ ಮಾತನಾಡಿ, ಮಹಿಳೆಯರು ಶೇ.15.8 ಹಾಗೂ ಪುರುಷರು ಶೇ.22.8ರಷ್ಟು ಉನ್ನತ ಶಿಕ್ಷಣ ಪಡೆದಿದ್ದು, ಅದರಲ್ಲಿ ಕೇವಲ 18.8ರಷ್ಟು ಮಾತ್ರ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳನ್ನು ಸ್ವಾಭಿಮಾನಿಗಳನ್ನಾಗಿ ಮಾಡುವ ನಿಟ್ಟಿನಲ್ಲಿ ವಿಶ್ವವಿದ್ಯಾನಿಲಯಗಳು ಸಾಗಬೇಕು ಎಂದು ತಿಳಿಸಿದರು.
ಈ ವೇಳೆ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಎಂ.ರಾಮಾಂಜನೇಯಲು, ಜಿಲ್ಲಾ ಪಂಚಾಯತ್ ಅಧ್ಯಕ್ಷ ತಿರುವರಂಗ ವಿ.ನಾರಾಯಣಸ್ವಾಮಿ, ಬ್ರಾಡ್‌ಫೋರ್ಡ್ ಇಂಟರ್‌ನೆಟ್ ಇಂಡಿಯಾದ ಸಂಸ್ಥಾಪಕ ಜಿ.ಟಿ. ಸುರೇಶ್‌ಕುಮಾರ್, ಮಾಜಿ ಕುಲಪತಿ ಡಾ.ಎನ್.ರಂಗಸ್ವಾಮಿ, ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ವಿಜಯಕುಮಾರ್ ಉಪಸ್ಥಿತರಿದ್ದರು.







