ನಿಗಮ ಮಂಡಳಿಗಳಿಗೆ ನೇಮಕ: ಸಿಎಂ ಜೊತೆ ಪರಮೇಶ್ವರ್ ಚರ್ಚೆ
ಬೆಂಗಳೂರು, ಎ.6: ನಿಗಮ, ಮಂಡಳಿಗಳಿಗೆ ನಿರ್ದೇಶಕರು ಹಾಗೂ ಸದಸ್ಯರನ್ನು ನೇಮಕ ಮಾಡುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಚರ್ಚೆ ನಡೆಸಿದ್ದಾರೆ.
ಬುಧವಾರ ನಗರದಲ್ಲಿನ ಮುಖ್ಯಮಂತ್ರಿಯ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಚರ್ಚೆ ನಡೆಸಿದ ಉಭಯ ನಾಯಕರು, ಸಚಿವ ಸಂಪುಟ ಪುನರ್ರಚನೆಗೂ ಮುಂಚಿತವಾಗಿ ನಿಗಮ, ಮಂಡಳಿಗಳಿಗೆ ಸದಸ್ಯರು ಹಾಗೂ ನಿರ್ದೇಶಕರನ್ನು ನೇಮಕ ಮಾಡುವ ಬಗ್ಗೆ ಸಮಾಲೋಚನೆ ನಡೆಸಿದರು.
ಎಪ್ರಿಲ್ ಮಾಸಾಂತ್ಯಕ್ಕೆ ಸಂಚಿವ ಸಂಪುಟ ಪುನರ್ರಚನೆ ಮಾಡಲು ಸಿದ್ದರಾಮಯ್ಯ ನಿರ್ಧರಿಸಿದ್ದು, ಮುಂದಿನ ವಾರ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಜೊತೆ ಹೊಸದಿಲ್ಲಿಗೆ ತೆರಳಿ ಪಕ್ಷದ ಹೈಕಮಾಂಡ್ ಜೊತೆ ಅಂತಿಮ ಸುತ್ತಿನ ಚರ್ಚೆ ನಡೆಸಲಿದ್ದಾರೆ.
ಪಂಚರಾಜ್ಯ ಚುನಾವಣೆಗಳ ಪ್ರಚಾರ ಕಾರ್ಯದಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ, ಉಪಾಧ್ಯಕ್ಷ ರಾಹುಲ್‌ಗಾಂಧಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್‌ಸಿಂಗ್ ವ್ಯಸ್ಥರಾಗಿರುವುದರಿಂದ, ಕಾಲಾವಕಾಶ ಲಭ್ಯವಾಗುತ್ತಿದ್ದಂತೆ ಹೊಸದಿಲ್ಲಿಗೆ ತೆರಳಲು ಉಭಯ ನಾಯಕರು ನಿರ್ಧರಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳು ಪೂರೈಸುತ್ತಿದ್ದರೂ ನಿಷ್ಠಾವಂತ ಕಾರ್ಯಕರ್ತರಿಗೆ ಇನ್ನೂ ಅಧಿಕಾರ ಹಂಚಿಕೆ ಮಾಡಲು ಮೀನಾಮೇಷ ಎಣಿಸುತ್ತಿರುವುದರಿಂದ ಪಕ್ಷದ ನಾಯಕತ್ವದ ವಿರುದ್ಧ ಕಾರ್ಯಕರ್ತರು ಬಹಿರಂಗವಾಗಿಯೆ ಧ್ವನಿ ಎತ್ತುತ್ತಿರುವುದು ಸರಕಾರಕ್ಕೆ ಮುಜುಗರ ಉಂಟು ಮಾಡುತ್ತಿದೆ.
ಸಚಿವ ಸಂಪುಟ ಪುನರ್ರಚನೆಗೆ ಒತ್ತಡ ಹೆಚ್ಚುತ್ತಿರುವ ಬೆನ್ನಲ್ಲೆ ನಿಗಮ, ಮಂಡಳಿಗಳ ನೇಮಕಕ್ಕೂ ಸರಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕಾರ್ಯಕರ್ತರು ಬಿಗಿಪಟ್ಟು ಹಿಡಿದಿರುವುದು ಸಿದ್ದರಾಮಯ್ಯನವರಿಗೆ ಕಂಗೆಡಿಸಿದೆ. ಈ ಹಿನ್ನೆಲೆಯಲ್ಲಿ ಬಜೆಟ್ ಅಧಿವೇಶನ ಮುಕ್ತಾಯಗೊಂಡ ನಂತರ ವಿಶ್ರಾಂತಿಗೆ ತೆರಳಬೇಕಿದ್ದ ಅವರು, ಕೇಂದ್ರಸ್ಥಾನದಲ್ಲಿದ್ದುಕೊಂಡು ನಿಗಮ, ಮಂಡಳಿಗಳ ನೇಮಕ ಹಾಗೂ ಸಂಪುಟ ಪುನರ್ರಚನೆ ಕುರಿತು ಚರ್ಚೆಗಳನ್ನು ನಡೆಸುತ್ತಿದ್ದಾರೆ.







