ವಿಶ್ವ ಆರೋಗ್ಯ ದಿನಾಚರಣೆಗೆ ಇಂದು ಸಿಎಂ ಚಾಲನೆ
ಬೆಂಗಳೂರು, ಎ.6: ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಇಂದ್ರಧನುಷ್ ಲಸಿಕಾ ಅಭಿಯಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎ.7ರಂದು ಬೆಳಗ್ಗೆ 10:30ಕ್ಕೆ ವಿಧಾನಸೌಧದ ಬ್ಯಾಂಕ್ವೆಟ್‌ಹಾಲ್‌ನಲ್ಲಿ ಚಾಲನೆ ನೀಡಲಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಬುಧವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಕ್ಕಳನ್ನು 9 ಮಾರಕ ಕಾಯಿಲೆಗಳಿಂದ ರಕ್ಷಿಸುವ ‘ಇಂದ್ರಧನುಷ್ ಲಸಿಕೆ’ ಮೂರನೆ ಹಂತದ ಅಭಿಯಾನವನ್ನು ಬೆಂಗಳೂರು, ಬಳ್ಳಾರಿ, ಕೊಪ್ಪಳ, ರಾಯಚೂರು, ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗುವುದು ಎಂದರು.
ಮೊದಲ ಎರಡು ಹಂತಗಳಲ್ಲಿ ಲಸಿಕೆಯಿಂದ ವಂಚಿತವಾಗಿದ್ದ ಮಕ್ಕಳನ್ನು ಗುರುತಿಸಿ ಲಸಿಕೆ ಹಾಕುವ ಯೋಜನೆ ರೂಪಿಸಲಾಗಿದೆ. ಇಂದ್ರಧನುಷ್ ಲಸಿಕೆ ಅಭಿಯಾನವು ಜುಲೈ ತಿಂಗಳವರೆಗೆ ನಡೆಯಲಿದ್ದು, 9747 ಗರ್ಭಿಣಿಯರು ಹಾಗೂ 53,866 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ಖಾದರ್ ಹೇಳಿದರು. ಗಂಟಲು ಮಾರಿ, ನಾಯಿಕೆಮ್ಮು, ಧನುರ್ವಾಯು, ಪೋಲಿಯೊ, ಬಾಲಕ್ಷಯ, ದಡಾರ, ಹೆಪಟೈಟೀಸ್-ಬಿ, ಮೆದುಳುಜ್ವರ ಮತ್ತು ನಿಮೋನಿಯಾ, ಮೆನಂಜೈಟಿಸ್ ಉಂಟು ಮಾಡುವ ಹಿಬ್‌ಬ್ಯಾಕ್ಟೀರಿಯಾ ರೋಗಗಳಿಗೆ ಲಸಿಕೆ ಹಾಕಲಾಗುವುದು ಎಂದು ಅವರು ವಿವರಣೆ ನೀಡಿದರು.
ಈ ಅಭಿಯಾನದಡಿ ಪೋಲಿಯೊಗೆ ಲಸಿಕೆ ಜೊತೆಗೆ ಈ ವರ್ಷದಿಂದ ಚುಚ್ಚುಮದ್ದು ನೀಡಲಾಗುವುದು. ಮಗುವಿನ ಜನನದಿಂದ ಹದಿನಾರು ವರ್ಷದವರೆಗೆ ವಿವಿಧ ಹಂತಗಳಲ್ಲಿ ಲಸಿಕೆ ಹಾಕಬೇಕಾಗುತ್ತದೆ ಎಂದು ಖಾದರ್ ಹೇಳಿದರು.
2015-16ನೆ ಸಾಲಿನಲ್ಲಿ ರಾಜ್ಯದ 23 ಜಿಲ್ಲೆಗಳಲ್ಲಿ 2 ಹಂತಗಳಲ್ಲಿ ಇಂದ್ರಧನುಷ್ ಅಭಿಯಾನ ಕೈಗೊಂಡು 1,16,783 ಗರ್ಭಿಣಿಯರು ಮತ್ತು 5,33,819 ಮಕ್ಕಳಿಗೆ ಲಸಿಕೆ ಹಾಕಲಾಗಿದೆ ಎಂದು ಅವರು ತಿಳಿಸಿದರು.
ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಈ ಬಾರಿ ಮಧುಮೇಹ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸಲು ‘ನಿಮ್ಮ ದೇಹವನ್ನು ಪ್ರೀತಿಸಿ ಮಧುಮೇಹದ ಏರಿಕೆಯನ್ನು ನಿಲ್ಲಿಸಿ ಮತ್ತು ಸೋಲಿಸಿ’ ಎಂಬ ಘೋಷವಾಕ್ಯದಡಿಯಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ಖಾದರ್ ತಿಳಿಸಿದರು.
ಸರಕಾರಿ ಆಸ್ಪತ್ರೆಗಳಲ್ಲಿರುವ ಯಂತ್ರೋ ಪಕರಣ ಮತ್ತು ಉಪಕರಣಗಳು ತಾಂತ್ರಿಕ ದೋಷದಿಂದ ಸ್ಥಗಿತಗೊಂಡರೆ ಅವುಗಳನ್ನು ತಕ್ಷಣವೆ ದುರಸ್ಥಿಪಡಿಸಲು ಅನುಕೂಲವಾಗುವಂತೆ ನಿರ್ವಹಣಾ ಕೇಂದ್ರಗಳನ್ನು ಸ್ಥಾಪಿಸಲು ಸರಕಾರ ನಿರ್ಧರಿಸಿದೆ ಎಂದು ಅವರು ಹೇಳಿದರು.







