ಜೈಲಿಗೆ ಹೋಗಲೂ ಸಿದ್ಧ ಉಪನ್ಯಾಸಕರ ಸವಾಲು
ಪಿಯು ವೌಲ್ಯಮಾಪನ ಬಹಿಷ್ಕಾರ: ಪ್ರತಿಭಟನೆ 4ನೆ ದಿನಕ್ಕೆ

ಬೆಂಗಳೂರು, ಎ.6: ದ್ವಿತೀಯ ಪಿಯುಸಿ ಉತ್ತರ ಪತ್ರಿಕೆ ಮೌಲ್ಯಮಾಪನ ಬಹಿಷ್ಕರಿಸಿ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರು ಫ್ರೀಡಂ ಪಾರ್ಕ್‌ನಲ್ಲಿ ನಡೆಸುತ್ತಿರುವ ಪ್ರತಿಭಟನೆ 4ನೆ ದಿನಕ್ಕೆ ಕಾಲಿಟ್ಟಿದೆ. ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ಉಪನ್ಯಾಸಕರ ಸಂಘ ಹಾಗೂ ಪ್ರಾಂಶುಪಾಲರ ಸಂಘ ತೀರ್ಮಾನ ಕೈಗೊಂಡಿದ್ದು, ವೇತನ ತಾರತಮ್ಯ ನಿವಾ ರಣೆಯಾಗುವವರೆಗೂ ಹೋರಾಟ ಕೈಬಿಡುವುದಿಲ್ಲ ಎಂದು ಉಪನ್ಯಾಸಕರು ಪಟ್ಟು ಹಿಡಿದಿದ್ದಾರೆ.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಉಪನ್ಯಾಸ ಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ, ಸರಕಾರ ನಮ್ಮ ಮೇಲೆ ಎಸ್ಮಾ ಕಾಯ್ದೆ ಜಾರಿಗೊಳಿಸಿದರೂ ಜೈಲಿಗೆ ಹೋಗಲು ಸಿದ್ಧರಿದ್ದೇವೆಯೇ ಹೊರತು ಮೌಲ್ಯಮಾಪನಕ್ಕೆ ಹಾಜರಾಗುವುದಿಲ್ಲ. ಎರಡು ದಶಕಗಳಿಂದ ಈ ಬೇಡಿಕೆ ಮುಂದಿಟ್ಟು ಹೋರಾಟ ನಡೆಸು ತ್ತಿದ್ದರೂ ಸರಕಾರ ಯಾವುದೇ ತೀರ್ಮಾನಕ್ಕೆ ಬಾರದಿರುವುದು ಖಂಡನೀಯ ಎಂದು ಕಿಡಿಕಾರಿದರು.
ಮೌಲ್ಯಮಾಪನ ಬಹಿಷ್ಕರಿಸಲು ಸರಕಾರವೇ ನೇರ ಕಾರಣವಾಗಿದೆ. ಇದೇ ವರ್ಷದ ಜನವರಿ ಹಾಗೂ ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲೂ ಹೋರಾಟ ನಡೆಸಿದಾಗ ಶಿಕ್ಷಣ ಸಚಿವರು ಹಾಗೂ ಮುಖ್ಯಮಂತ್ರಿಯವರು ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದರು.
ಆದರೆ, ಇದುವರೆಗೂ ಆಶ್ವಾಸನೆ ಯಲ್ಲೇ ಉಳಿದಿದೆ. ಹೀಗಾಗಿ ಸಂಘದ ಪದಾಧಿಕಾರಿಗಳ ನೇತೃತ್ವದಲ್ಲಿ ಮೌಲ್ಯಮಾಪನ ಬಹಿಷ್ಕಾರ ನಿರ್ಧಾರ ಕೈಗೊಳ್ಳಲಾಗಿದೆ. ಈ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಎಚ್ಚರಿಸಿದರು.







