ಬರಪೀಡಿತ ಪ್ರದೇಶಗಳ ನಿರ್ಲಕ್ಷವೇಕೆ?: ಕೇಂದ್ರಕ್ಕೆ ಸುಪ್ರೀಂ ತರಾಟೆ

ಹೊಸದಿಲ್ಲಿ, ಎ.6: ಬರಪೀಡಿತ ಪ್ರದೇಶಗಳ ಬಗ್ಗೆ ನಿರ್ಲಕ್ಷ ವಹಿಸಿರುವ ಕೇಂದ್ರ ಸರಕಾರವನ್ನು ಸುಪ್ರೀಂಕೋರ್ಟ್ ಬುಧವಾರ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಒಂಬತ್ತು ರಾಜ್ಯಗಳು ಭೀಕರ ಬರದಿಂದ ನಲುಗಿವೆ. ಕೇಂದ್ರ ಸರಕಾರ ಈ ವಿಷಯದ ಬಗ್ಗೆ ಕುರುಡಾಗಿರಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿತು.
ಬರಪೀಡಿತ ರಾಜ್ಯಗಳಲ್ಲಿ ಬಡವರಿಗೆ ಉಚಿತ ಆಹಾರಧಾನ್ಯಗಳನ್ನು ಪೂರೈಸಲು ಸೂಚಿಸಬೇಕು ಎಂದು ಕೋರಿ, ಸ್ವರಾಜ್ ಅಭಿಯಾನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.
ರಾಜ್ಯದಲ್ಲಿ ಆಹಾರ ಭದ್ರತೆ ಕಾಯ್ದೆಯನ್ನು ಎಪ್ರಿಲ್ ಒಂದರಿಂದಲೇ ಜಾರಿಗೊಳಿಸಿದ್ದಾಗಿ ಗುಜರಾತ್ ಸರಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿತು.
ಸರಣಿ ವರದಿಗಳ ಮೂಲಕ ಸುದ್ದಿವಾಹಿನಿಗಳು ಬುಂಡೇಲ್‌ಖಂಡ ದಯನೀಯ ಸ್ಥಿತಿ ಬಗ್ಗೆ ಬೆಳಕು ಚೆಲ್ಲಿದ್ದವು.
ಸತತವಾಗಿ ಮಳೆ ಕೊರತೆ ಮತ್ತು ಆಲಿಕಲ್ಲು ಮಳೆಯಿಂದಾಗಿ ಬೆಳೆ ಸಂಪೂರ್ಣ ನಾಶವಾಗಿದ್ದು, ಲಕ್ಷಾಂತರ ಮಂದಿಯ ಬದುಕು ನರಕ ಸದೃಶವಾಗಿದೆ. ಕೇವಲ ರೊಟ್ಟಿ ಮತ್ತು ಉಪ್ಪಿನಿಂದ ಜನ ಜೀವನ ಸಾಗಿಸುತ್ತಿದ್ದಾರೆ. ಲಕ್ಷಾಂತರ ಮಂದಿ ವಲಸೆ ಹೋಗುತ್ತಿದ್ದಾರೆ ಎಂದು ವಿವರಿಸಲಾಗಿತ್ತು.







