ಕೇರಳ: ಪ್ರಿನ್ಸಿಪಾಲ್‌ಗೆ ಅಣಕು ಶವಕುಠೀರ ನಿರ್ಮಿಸಿ ಅವಹೇಳನ ನಡೆಸಿದ ನಾಲ್ವರು ಎಸ್‌ಎಫ್‌ಐ ಕಾರ್ಯಕರ್ತರ ಬಂಧನ,ಬಿಡುಗಡೆ

ಪಾಲಕ್ಕಾಡ್, ಎಪ್ರಿಲ್.7: ಸರಕಾರಿ ವಿಕ್ಟೋರಿಯಾ ಕಾಲೇಜ್ ಪ್ರಿನ್ಸಿಪಾಲ್ ಟಿ.ಎನ್.ಸರಸು ನಿವೃತ್ತರಾಗುವ ದಿವಸ ಕ್ಯಾಂಪಸ್‌ನಲಿ ಶವಕುಠೀರವುಂಟು ಮಾಡಿ ಅಪಮಾನಿಸಿದರೆಂಬ ದೂರಿನ ಹಿನ್ನೆಲೆಯಲ್ಲಿ ಕಾಲೇಜ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಸಹಿತ ನಾಲ್ವರು ಎಸ್‌ಎಫ್‌ಐ ಕಾರ್ಯಕರ್ತರನ್ನು ಪಾಲಕ್ಕಾಡ್ ಟೌನ್ ಉತ್ತರ ಪೊಲೀಸರು ಬಂಧಿಸಿದ್ದಾರೆಂದು ವರದಿಯಾಗಿದೆ. ಯೂನಿಯನ್‌ನ ಪ್ರಧಾನಕಾರ್ಯದರ್ಶಿ ಪಿಎನ್ ಅಭಿಜಿತ್, ಕೆ ಅದಿತ್ಯನ್, ವಿವಿನಿವಿನ್, ಎಂ ಮಹೇಶ್ ಇವರು ಬಂಧಿಸಲಾದ ವಿದ್ಯಾರ್ಥಿಗಳಾಗಿದ್ದು ನಂತರ ಜಾಮೀನಿನಲ್ಲಿ ಇವರನ್ನು ಬಿಡುಗಡೆಗೊಳಿಸಲಾಗಿದೆ. ಪ್ರಕರಣದಲ್ಲಿ ಇವರಲ್ಲದೆ ಒಟ್ಟು ಹದಿನೈದು ಮಂದಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆಂದು ವರದಿಗಳು ತಿಳಿಸಿವೆ.
ಕಳೆದ ಮಾರ್ಚ್31ಕ್ಕೆ ಕೇಸಿಗೆ ಕಾರಣವಾದ ಘಟನೆ ನಡೆದಿದ್ದು ಪ್ರಿನ್ಸಿಪಾಲ್ ಸೇವೆಯಿಂದ ನಿವೃತ್ತಿಯಾಗುವ ದಿವಸ ಕಾಲೇಜ್ ಕ್ಯಾಂಪಸ್‌ನಲ್ಲಿ ಶವಕುಠೀರವುಂಟುಮಾಡಿ ಸಾಂಕೇತಿಕವಾಗಿ ದಫನಕಾರ್ಯ ನೆರವೇರಿಸಿ ಪ್ರಿನ್ಸಿಪಾಲ್‌ರನ್ನು ಅವಮಾನಿಸಿದ್ದಾರೆಂದು ವಿದ್ಯಾರ್ಥಿಗಳ ವಿರುದ್ಧ ದೂರು ನೀಡಲಾಗಿತ್ತು. ನಾಚಿಕೆಗೇಡು ನಿನ್ನ ಹೆಸರು ಸರಸು ಎಂದು ಬರೆದಿಟ್ಟು ಶವಕುಠೀರವನ್ನು ಇವರು ಮಾಡಿದ್ದರು. ಸಂಜೆ ವೇಳೆ ಕೆಲವು ವಿದ್ಯಾರ್ಥಿಗಳು ಪಟಾಕಿ ಸಿಡಿಸಿರುವುದಾಗಿಯೂ ಹೇಳಲಾಗುತ್ತಿದೆ. ಈ ಘಟನೆಯಿಂದ ತನಗೆ ಮಾನಹಾನಿಯಾಗಿದೆಯೆಂದು ಪ್ರಿನ್ಸಿಪಾಲ್ ದೂರು ನೀಡಿದ್ದರು.
ಅದೇ ವೇಳೆ ಘಟನೆಯ ಹಿಂದೆ ಎಸ್‌ಎಫ್‌ಐ ಇದೆಯೆಂಬುದನ್ನು ಅದರ ಪದಾಧಿಕಾರಿಗಳು ನಿರಾಕರಿಸಿದ್ದಾರೆ. ಅಣಕು ಶವಕುಠೀರ ನಿರ್ಮಿಸಿದವರು ಸಂಘಪರಿವಾರ ಆಗಿರಬೇಕು. ಪ್ರಿನ್ಸಿಪಾಲ್‌ಗೂ ಸಂಘಪರಿವಾರಕ್ಕೂ ಸಂಬಂಧವಿದೆಯೆಂದೂ ಎಸ್‌ಎಫ್‌ಐ ಯುನಿಟ್ ಪದಾಧಿಕಾರಿಯಾದ ಶೈಕ್ ನಫ್ಸ್,ಆನಂದ್ ಜಯನ್‌ಬಿ.ಹಾಶಿರ್,ಎ ಝುಲ್ಫಿಕರ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಘಟನೆಯ ಆರೋಪಿಗಳಾದ ಸಕಲ ಎಸ್‌ಎಫ್‌ಐ ಕಾರ್ಯಕರ್ತರನ್ನು ಬಂಧಿಸಬೇಕೆಂದು ಯುವಮೋರ್ಚಾ ಕಾರ್ಯಕರ್ತರು ಟೌನ್ ಉತ್ತರ ಪೊಲೀಸ್ ಠಾಣೆಗೆ ಮಾರ್ಚ್ ನಡೆಸಿರುವುದಾಗಿ ವರದಿಯಾಗಿದೆ.







