ಪುತ್ತೂರು ನಗರ ಸಭೆ: ಅಧ್ಯಕ್ಷೆಯಾಗಿ ಜಯಂತಿ ನಾಯ್ಕ ಅವಿರೋಧ ಆಯ್ಕೆ,ಉಪಾಧ್ಯಕ್ಷರಾಗಿ ವಿಶ್ವನಾಥ ಗೌಡ
ಅಧಿಕಾರ ಪಾಲು ಮಾಡಿಕೊಂಡ ಬಿಜೆಪಿ ಕಾಂಗ್ರೆಸ್

ಪುತ್ತೂರು: ನಗರಸಭೆಯ ನೂತನ ಅಧ್ಯಕ್ಷೆಯಾಗಿ ಕಾಂಗ್ರೆಸ್‌ನ ಜಯಂತಿ ನಾಯ್ಕ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 12 ಮತ ಪಡೆದು ಬಿಜೆಪಿಯ ವಿಶ್ವನಾಥ ಗೌಡ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಹಮ್ಮದ್ ಆಲಿ ಅವರು ಶಾಸಕಿ ಮತ ಸೇರಿದಂತೆ 9 ಮತ ಪಡೆದು ಸೋಲೊಪ್ಪಿಕೊಂಡರು.
ಮೀಸಲಾತಿಯನ್ವಯ ಅಧ್ಯಕ್ಷ ಸ್ಥಾನಕ್ಕೆ ಯಾವುದೇ ಸ್ಪರ್ಧೆ ಇರಲಿಲ್ಲ. ಉಪಾಧ್ಯಕ್ಷ ಸ್ಥಾನದ ಕುತೂಹಲ ಮಾತ್ರ ಗರಿಗೆದರಿತ್ತು. ಎರಡೂ ಪಕ್ಷಗಳು ತಮ್ಮ ಅಭ್ಯರ್ಥಿಯ ಹೆಸರನ್ನು ಬಹಿರಂಗಪಡಿಸಿರಲಿಲ್ಲ. ಬೆಳಗ್ಗೆ 10 ಗಂಟೆಗೆ ಚುನಾವಣಾಧಿಕಾರಿ ಸಹಾಯಕ ಆಯುಕ್ತ ಡಾ.ರಾಜೇಂದ್ರ ಕೆ.ವಿ. ಅವರಲ್ಲಿ ನಾಮಪತ್ರ ಸಲ್ಲಿಸಲಾಯಿತು. 12 ಗಂಟೆಗೆ ಚುನಾವಣೆ ನಡೆಯಿತು. ಶಾಸಕಿ ತನ್ನ ಹಕ್ಕನ್ನು ಚಲಾಯಿಸಿ, ತೆರಳಿದರು. ಬಿಜೆಪಿಯ ವಿಶ್ವನಾಥ ಗೌಡ ಹಾಗೂ ಕಾಂಗ್ರೆಸ್‌ನ ಮಹಮ್ಮದಾಲಿ ಪರಸ್ಪರ ಎದುರಾಳಿಯಾಗಿದ್ದರೂ, ಜಯ ನಿರೀಕ್ಷೆಯಂತೆ ಬಿಜೆಪಿ ಪಾಲಾಯಿತು. ಹಿಂದಿನ ಬಾರಿ ವಿಪ್ ಉಲ್ಲಂಘಿಸಿದ ಏಳು ಸದಸ್ಯರಿಗೆ ಮತದಾನಕ್ಕೆ ಅವಕಾಶವಿಲ್ಲದ ಕಾರಣ ಅವರು ಮತ ಚಲಾಯಿಸಲಿಲ್ಲ.
ಮೊದಲ ಎರಡೂವರೆ ವರ್ಷದ ಅವಧಿಯಲ್ಲಿ ಬಿಜೆಪಿ ಉಪಾಧ್ಯಕ್ಷ ಸ್ಥಾನದಲ್ಲಿ ಕುಳಿತಿದ್ದು, ಮುಂದಿನ 2.5 ವರ್ಷವೂ ಇದೇ ಗಾದಿಯಲ್ಲಿ ಮುಂದುವರಿಯಲಿದೆ. ಕಾಂಗ್ರೆಸ್‌ಗೆ ಉಪಾಧ್ಯಕ್ಷ ಸ್ಥಾನವನ್ನು ನೀಡಿ ಎಂಬ ಕಾಂಗ್ರೆಸಿಗರ ಸವಾಲನ್ನು ಸ್ವೀಕರಿಸದೇ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಗಿಳಿದು ಗೆಲುವು ಸಾದಿಸಿದೆ.
ಅಧ್ಯಕ್ಷ ಉಪಾದ್ಯಕ್ಷರ ಆಯ್ಕೆಯ ಬಳಿಕ ವಿಪ್ ಉಲ್ಲಂಘಿಸಿದ ಆರು ಮಂದಿ ಸದಸ್ಯರ ಸದಸ್ಯತ್ವ ಅನರ್ಹಗೊಳಿಸಿಲು ಹೋರಾಟ ನಡೆಸಿದ ಸದಸ್ಯ ಮಹಮ್ಮದಾಲಿ ಅವರಿಗೂ ಹೂಹಾರ ಹಾಕಿ ಅಭಿನಂದಿಸಲಾಯಿತು. ಜಯಂತಿ ನಾಕ್ ಅವರ ಗೆಲುವನ್ನು ಮಹಮ್ಮದಾಲಿ ಗೆಲುವಂತೆ ಬಿಂಬಿಸಲಾಯಿತು. ಪುತ್ತೂರು ಬ್ಲಾಕ್ ಕಾಂಗ್ರೆಸ್‌ನ ನಿಟಕಪೂರ್ವ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಅವರಿಗೂ ಹೂ ಹಾಕಿ ಪಕ್ಷದ ಕಾರ್ಯಕರ್ತರು ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಾಧ್ಯಮದ ಜತೆ ಮಾತನಾಡಿದ ನೂತನ ಅಧ್ಯಕ್ಷೆ ಜಯಂತಿ ನಾಕ್, ನೀರಿನ ಸಮಸ್ಯೆ, ಒಳಚರಂಡಿ, ರಸ್ತೆ, ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು. ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮ ಆಡಳಿತ ನೀಡಲಾಗುವುದು. ರಿಮೋಟ್ ಕಂಟ್ರೋಲ್ ಎಂಬ ಅಪವಾದ ಸುಳ್ಳು. ಇದಕ್ಕೆ ಅವಕಾಶ ನೀಡದೇ, ಸ್ವಂತ ಬಲದಿಂದ ಆಡಳಿತ ನಡೆಸುವುದಾಗಿ ತಿಳಿಸಿದರು.
ಉಪಾಧ್ಯಕ್ಷ ವಿಶ್ವನಾಥ ಗೌಡ ಮಾತನಾಡಿ, ಉತ್ತಮ ಆಡಳಿತಕ್ಕಾಗಿ ಪಕ್ಷ ರಹಿತವಾಗಿ ಸಹಕಾರ ನೀಡಲಾಗುವುದು. ಬಿಜೆಪಿಯ 12 ಸದಸ್ಯರು ಆಡಳಿತಕ್ಕೆ ಸಹಕರಿಸುತ್ತೇವೆ. ಹಿಂದಿನ ಯೋಜನೆಗಳ ಅನುಷ್ಠಾನದ ಕಡೆ ಗಮನ ಹರಿಸಲಾಗುವುದು. ನೀರಿನ ಬರ, ತ್ಯಾಜ್ಯ ವಿಲೇವಾರಿ ಸೇರಿದಂತೆ ಒಟ್ಟು ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.
ಧ್ವನಿಗೂಡಿಸಿದ ಕ್ಷೇತ್ರ ಬಿಜೆಪಿ ಅಧ್ಯಕ್ಷ ಅಪ್ಪಯ್ಯ ಮಣಿಯಾಣಿ, ಒಳಿತು- ಕೆಡುಕನ್ನು ಜನ ನಿರ್ಧರಿಸುತ್ತಾರೆ. ಬಿಜೆಪಿಗೆ ನಗರಸಭೆಯಲ್ಲಿ ಬಹುಮತವಿತ್ತು, ಅದನ್ನು ಬಳಸಿಕೊಳ್ಳಲಾಗಿದೆ. ಉಪಾಧ್ಯಕ್ಷ ಸ್ಥಾನ ಬಿಜೆಪಿ ಪಾಲಾಯಿತು. ಬಿಜೆಪಿಯ ನೀತಿ- ನಿಯಮದಂತೆ ಆಡಳಿತಕ್ಕೆ ಸಹಕಾರ ನೀಡಲಾಗುವುದು ಎಂದರು.
2015ರಲ್ಲಿ ಪುರಸಭೆಯಾಗಿದ್ದ ಪುತ್ತೂರು ನಗರಸಭೆಯಾಗಿ ಮೇಲ್ದರ್ಜೆಗೇರುವ ಸಮಯದಲ್ಲಿ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಅಧ್ಯಕ್ಷರಾಗಿದ್ದರು. ಆದರೆ ಜಿಲ್ಲಾಧಿಕಾರಿ ಹಾಗೂ ಹೈಕೋರ್ಟ್ ಸದಸ್ಯತ್ವ ಅನರ್ಹಗೊಳಿಸಿದ ಹಿನ್ನೆಲೆಯಲ್ಲಿ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಪ್ರಥಮ ಅಧ್ಯಕ್ಷ ಎಂಬ ಪದವಿ ಕಳೆದುಕೊಳ್ಳುವಂತಾಯಿತು. ಮುಂದೆ ಅಧ್ಯಕ್ಷರಾದ ಜೀವಂಧರ್ ಜೈನ್ ಪ್ರಭಾರ ನೆಲೆಯಲ್ಲಿ ಅಧಿಕಾರ ನಡೆಸಿದ್ದರು. ಇದೀಗ ಜಯಂತಿ ನಾಕ್ ಅಧ್ಯಕ್ಷತೆ ವಹಿಸಿಕೊಂಡಿದ್ದು, ನಗರಸಭೆಯಾಗಿ ಮೇಲ್ದರ್ಜೆಗೇರಿದ ಪುರಸಭೆಯು ಒಂದು ಅವಧಿಯಲ್ಲಿ ಮೂವರು ಅಧ್ಯಕ್ಷರನ್ನು ಕಂಡಿತ್ತು.







