ಶರೀರ ತೆಳ್ಳಗಾಗಲು ಔಷಧ ಸೇವಿಸಿದ ಮಿಮಿಕ್ರಿ ಕಲಾವಿದನ ಸಾವು!

ಪೈನಾವಿ, ಎಪ್ರಿಲ್.7: ಶರೀರ ಸಪೂರವಾಗಲು ಮಲ್ಟಿಲೆವೆಲ್ ಮಾರ್ಕೆಟಿಂಗ್ ಕಂಪೆನಿಯ ಔಷಧ ಸೇವಿಸಿದ ಮಿಮಿಕ್ರಿ ಕಲಾವಿದನ ಸಾವು!
ದಪ್ಪ ಶರೀರವನ್ನು ಸಪೂರ ಮಾಡಿಸಿಕೊಳ್ಳುವುದಕ್ಕಾಗಿ ಮಲ್ಟಿ ಲೆವೆಲ್ ಮಾರ್ಕೆಟಿಂಗ್ ಕಂಪೆನಿಯ ಔಷಧ ಸೇವಿಸಿ ಯುವಕನೊಬ್ಬ ಮೃತನಾದ ಘಟನೆ ಕೇರಳದಿಂದ ವರದಿಯಾಗಿದೆ. ಕಟ್ಟಪ್ಪನ ವಲಿಯಕಂಡಿ ರಾಜಶ್ರೀ ಭವನದ ಶಶಿ-ರಾಜಶ್ರೀ ದಂಪತಿಗಳ ಪುತ್ರ ಮನು ಎಸ್. ನಾಯರ್(26) ಮೃತನಾದ ದುರದೃಷ್ಟವಂತನಾಗಿದ್ದು ಈ ಔಷಧ ಸೇವನೆಯೇ ಸಾವಿಗೆ ಕಾರಣವೆಂದು ತಿಳಿದು ಬಂದಿದೆ.
ನಾಲ್ಕು ತಿಂಗಳಿಂದ ಮಲ್ಟಿಲೆವೆಲ್ ಮಾರ್ಕೆಟಿಂಗ್ ಕಂಪೆನಿಯ ಔಷಧವನ್ನು ಸೇವಿಸುತ್ತಿದ್ದು ಈ ಔಷಧದ ಫಲವಾಗಿ ರಕ್ತದಲ್ಲಿನ ಸಕ್ಕರೆ ಅಂಶ ಕ್ರಮಾತೀತವಾಗಿ ಹೆಚ್ಚಿದ ಪರಿಣಾಮ ಸಂಭವಿಸಿದ ಹೃದಯಾಘಾತದಿಂದ ಮನು ನಾಯರ್ ಮೃತರಾದರೆಂದು ವೈದ್ಯರು ತಿಳಿಸಿರುವುದಾಗಿ ವರದಿಯಾಗಿದೆ. ಪೊಲೀಸರು ಅಸಹಜ ಮರಣವೆಂದು ಕೇಸು ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನು ಪೈನಾವಿಯ ಜಿಲ್ಲಾಸ್ಪತ್ರೆಯಲ್ಲಿ ಪೋಸ್ಟ್‌ಮಾರ್ಟಂ ನಡೆಸಿ ಬಂಧುಗಳಿಗೆ ಬಿಟ್ಟುಕೊಡಲಾಗಿದೆ. ಮನು ಮಿಮಿಕ್ರಿ ಆರ್ಟಿಸ್ಟ್ ಆಗಿದ್ದು ಖಾಸಗಿ ಸಂಸ್ಥೆಯೊಂದರಲ್ಲಿ ಕಲೆಕ್ಷನ್ ಏಜೆಂಟ್ ಆಗಿಯೂ ದುಡಿಯುತ್ತಿದ್ದ ಎಂದು ವರದಿಗಳು ತಿಳಿಸಿವೆ.ಮನುವಿನ 100 ಕೆ.ಜಿ. ಇದ್ದ ದೇಹದ ತೂಕ 52ಕೆಜಿಗೆ ಇಳಿಕೆಯಾಗಿತ್ತು. ಔಷಧದ ಸೈಡ್ ಇಫೆಕ್ಟಾಗಿ ರಕ್ತದಲ್ಲಿ ಸಕ್ಕರೆ ಅಂಶ ಭಾರೀ ಹೆಚ್ಚಳವಾಗಿತ್ತು . ಅದನ್ನು ಪ್ರತಿರೋಧಿಸಲು ಅದೇ ಕಂಪೆನಿಯ ಬೇರೊಂದು ಔಷಧವನ್ನು ಸೇವಿಸಲು ತೊಡಗಿದ್ದರು. ಈ ಔಷಧ ಸೇವಿಸಿದ ನಂತರ ಮನುವಿಗೆ ಆಹಾರ ರುಚಿಸುತ್ತಿರಲಿಲ್ಲ ಎನ್ನಲಾಗಿದೆ.
ಅನಾರೋಗ್ಯ ಕಾಡಿದ್ದರಿಂದ ಮನುರನ್ನು ಮಂಗಳವಾರ ನಗರದ ಖಾಸಗಿ ಆಸ್ಪತ್ರೆಗೆಸೇರಿಸಲಾಗಿತ್ತು. ಇನ್ಸುಲಿನ್ ನೀಡಬೇಕಾಗಿದೆ ಎಂದು ವೈದ್ಯರು ಶಿಫಾರಸು ಮಾಡಿದ್ದರು. ಆದರೆ ಆಯುರ್ವೇದ ಚಿಕಿತ್ಸೆ ಪಡೆಯುತ್ತಿರುವುದರಿಂದ ಆಸ್ಪತ್ರೆಗೆ ಸೇರಿಸದೆ ಮನೆಗೆ ಕರೆದೊಯ್ಯಲಾಗಿತ್ತು. ತಾವೇ ಸ್ವಇಚ್ಛೆಯಿಂದ ಮನೆಗೆ ಕರೆದುಕೊಂಡು ಹೋಗುವುದಾಗಿ ಮನೆಯವರು ಬರೆದು ಕೊಟ್ಟು ಮನುವನ್ನು ಮನೆಗೆ ಕರೆದುಕೊಂಡು ಹೋಗಿದ್ದರು. ಮನೆಗೆಹೋದ ನಂತರ ಬೆಳಗ್ಗೆ ಎಂಟೂವರೆ ಗಂಟೆಗೆ ಮತ್ತೆ ಮನುವನ್ನು ಆಸ್ಪತ್ರೆಗೆ ಕರೆತರಲಾದರೂ ಮನು ಮೃತರಾದರು ಎಂದು ವರದಿಗಳು ತಿಳಿಸಿವೆ.







