2014 ರಲ್ಲಿ 'ಸೆಕ್ಯುರಿಟಿ ಥ್ರೆಟ್ ' ಆಗಿದ್ದು, 2016 ರಲ್ಲಿ 'ಸಾಧನೆ' ಆಗಿದ್ದು ಹೇಗೆ ಮೋದೀಜಿ ?
ದೇಶದ 100 ಕೋಟಿ ನಾಗರೀಕರು ಆಧಾರ್ ಕಾರ್ಡ್ ಪಡೆದ ಬಗ್ಗೆ ನರೇಂದ್ರ ಮೋದಿ ಸರಕಾರ ತನ್ನ ಬೆನ್ನನ್ನು ತಾನೇ ತಟ್ಟಿಕೊಂಡಿದೆ. ಅದರ ಪ್ರಕಾರ 100 ಕೋಟಿಯಲ್ಲಿ ಹೆಚ್ಚಿನವರು ಈ ಸರಕಾರದ ಕಳೆದೆರಡು ವರ್ಷಗಳ ಅವಧಿಯಲ್ಲೇ ಕಾರ್ಡ್ ಪಡೆದಿದ್ದಾರೆ.
ಈ ಸಂದರ್ಭದಲ್ಲಿ ಕೇಂದ್ರ ದೂರ ಸಂಪರ್ಕ ಸಚಿವ ರವಿ ಶಂಕರ್ ಪ್ರಸಾದ್ ಅವರ ಹೇಳಿಕೆ ಇಲ್ಲಿದೆ :
" 100 ಕೋಟಿಗೂ ಹೆಚ್ಚು ಭಾರತೀಯರು ಈಗ ಆಧಾರ್ ಗುರುತು ಯೋಜನೆಯಲ್ಲಿ ಸೇರಿದ್ದಾರೆ. ಆಧಾರ್ ಉತ್ತಮ ಆಡಳಿತದ ದಾರಿಯಾಗಿದೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಬಡವರು ಹಾಗು ಅರ್ಹರನ್ನು ತಲುಪುವ ಹಾದಿಯಾಗಿದೆ ಆಧಾರ್. ಪ್ರತಿದಿನ 5-7 ಲಕ್ಷ ಜನ ಆಧಾರ್ ಕಾರ್ಡ್ ಪಡೆಯುತ್ತಿದ್ದಾರೆ. ಈಗ ಅದು ವಿಶ್ವದ ಅತಿದೊಡ್ಡ ಡಿಜಿಟಲ್ ಗುರುತು ಯೋಜನೆಯಾಗಿದೆ. ಆಧಾರ್ ನಲ್ಲಿರುವ ಮಾಹಿತಿಗಳು ಸಂಪೂರ್ಣ ಸುರಕ್ಷಿತವಾಗಿವೆ. ಇದರಲ್ಲಿ ಖಾಸಗಿತನವನ್ನು ವಸ್ತುನಿಷ್ಟವಾಗಿ, ನ್ಯಾಯಯುತವಾಗಿ ಕಾಪಾಡಲಾಗಿದೆ"
ಆದರೆ ಈಗ ಪ್ರಧಾನಿಯಾಗಿರುವ 2014 ರಲ್ಲಿ ಗುಜರಾತ್ ಮುಖ್ಯಮಂತ್ರಿ ಹಾಗು ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ ಅವರು ಎಪ್ರಿಲ್ 8, 2014 ರಂದು ಮಾಡಿದ ಟ್ವೀಟ್ ಒಂದನ್ನು ಗಮನಿಸಿ :
" ಆಧಾರ್ ಕುರಿತು ನಾನು ಭೇಟಿ ಮಾಡಿದ ತಂಡವಾಗಲಿ , ಪ್ರಧಾನಿಯವರಾಗಲಿ ಅದರಿಂದ ಇರುವ ಸುರಕ್ಷತಾ ಬೆದರಿಕೆ ಕುರಿತು ನನ್ನ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ. ಇದರಲ್ಲಿ ದೂರದೃಷ್ಟಿಯಿಲ್ಲ. ಕೇವಲ ರಾಜಕೀಯ ಗಿಮಿಕ್ ಇದು ( "On Aadhaar, neither the Team that I met nor PM could answer my Qs on security threat it can pose. There is no vision, only political gimmick," )"

ವಿಪಕ್ಷದಲ್ಲಿರುವಾಗ ' ಸೆಕ್ಯುರಿಟಿ ಥ್ರೆಟ್' (ಸುರಕ್ಷತಾ ಬೆದರಿಕೆ ), ಆಡಳಿತದಲ್ಲಿರುವಾಗ ' ಸಾಧನೆ ' ! ಹೇಗಿದೆ ಮೋದಿ ಸಾಹೇಬರ ದ್ವಂದ್ವ ?
ಮೋದಿಯವರು ಅಂದು ಹೇಳಿದ ಹಾಗೆ ಆಧಾರ್ ' ಸುರಕ್ಷತಾ ಬೆದರಿಕೆ' ಯೇ ಆಗಿದ್ದಲ್ಲಿ ಅದು ಅತ್ಯಂತ ಗಂಭೀರ ವಿಷಯ. ಮೋದಿಯವರು ಅಧಿಕಾರಕ್ಕೆ ಬಂಡ ಕೂಡಲೇ ಅದನ್ನು ರದ್ದು ಪಡಿಸಿ ಅದನ್ನು ಜಾರಿಗೆ ತಂದವರ ವಿರುದ್ಧ 'ಆ ಪ್ರಮಾದಕ್ಕಾಗಿ' ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕಿತ್ತು. ಅಲ್ಲದಿದ್ದರೆ ಆಧಾರ್ ನಿಂದ ಯಾವುದೇ ಅಪಾಯವಿಲ್ಲ, ಅದು ದೇಶಕ್ಕೆ ಅತ್ಯಗತ್ಯ ಎಂದು ಅವರಿಗೆ ಈಗ ಮನವರಿಕೆಯಾಗಿದ್ದರೆ ಅದನ್ನು ಮನಪೂರ್ವಕವಾಗಿ ಒಪ್ಪಿಕೊಂಡು ತಮ್ಮ ತಪ್ಪು ಹೇಳಿಕೆಯನ್ನು ಹಿಂಪಡೆದು ಅಂದಿನ ಸರಕಾರಕ್ಕೆ ಅಭಿನಂದನೆ ಸಲ್ಲಿಸಬೇಕಿತ್ತು.
ಆದರೆ ಅಷ್ಟು ಪಾರದರ್ಶಕತೆ , ಪ್ರಾಮಾಣಿಕತೆಯನ್ನು ಇವರಿಂದ ನಿರೀಕ್ಷಿಸುವುದು ನಮ್ಮ ತಪ್ಪಾಗುತ್ತದೆ. ಅಷ್ಟೇ .







