ಮಂಗಳೂರು ವಿವಿಯಲ್ಲಿ ಕೊಂಕಣಿ ಭಾಷೆಯಲ್ಲಿ ಎಂ.ಎ ಪದವಿ: ಪ್ರೊ.ಕೆ.ಭೈರಪ್ಪ
ಮಂಗಳೂರು, ಎ.7: ಮುಂದಿನ ಶೈಕ್ಷಣಿಕ ವರ್ಷದಿಂದ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕೊಂಕಣಿ ಭಾಷೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಆರಂಭಿಸಲಾಗುವುದು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ.ಭೈರಪ್ಪ ಹೇಳಿದರು.
ಅವರು ಇಂದು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಡೆದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಕೊಂಕಣಿ ಅಧ್ಯಯನ ಪೀಠದ ನೇತೃತ್ವದಲ್ಲಿ ನಡೆದ ಕೊಂಕಣಿ ಶಿಕ್ಷಣ ಸಂಭ್ರಮ, ಕೊಂಕಣಿ ಸಾಹಿತ್ಯ ಸಂವಾದ ಮತ್ತು ಕೊಂಕಣಿ ಪೀಠದ ಕಾರ್ಯಯೋಜನೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕೊಂಕಣಿ ಭಾಷೆಯಲ್ಲಿ ಎಂ ಎ ಆರಂಭಿಸುವ ಬಗ್ಗೆ ಈಗಾಗಲೆ ಪ್ರಕ್ರೀಯೆ ಪ್ರಗತಿಯಲ್ಲಿದ್ದು ಮೇ ತಿಂಗಳಲ್ಲಿ ಇದರ ಸ್ಪಷ್ಟ ಚಿತ್ರಣ ಸಿಗಲಿದೆ. ಕೊಂಕಣಿ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಆರಂಭಿಸುವ ನಿಟ್ಟಿನಲ್ಲಿ ರುವ ಕೆಲವೊಂದು ತಾಂತ್ರಿಕ ಸಮಸ್ಯೆಗಳನ್ನ್ನು ಪರಿಹರಿಸಲಾಗುವುದು ಎಂದು ಹೇಳಿದರು.
ಅದೇ ರೀತಿ ಕೊಂಕಣಿ ಅಧ್ಯಯನ ಪೀಠದಲ್ಲಿ ಇನ್ನಷ್ಟು ಸಾಹಿತ್ಯ ಕಾರ್ಯಕ್ರಮಗಳನ್ನು ಮಾಡುವ ನಿಟ್ಟಿನಲ್ಲಿ ಕೊಂಕಣಿ ಅಧ್ಯಯನ ಪೀಠಕ್ಕೆ ಗೌರವ ನಿರ್ದೇಶಕರನ್ನು ನೇಮಿಸಲು ಚಿಂತಿಸಲಾಗಿದೆ. ಕೊಂಕಣಿ ಭಾಷೆಯಲ್ಲಿ ಸೇವೆ ಸಲ್ಲಿಸದ ಹಿರಿಯರೊಬ್ಬರನ್ನು ಈ ಸ್ಥಾನಕ್ಕೆ ಆಯ್ಕೆ ಮಾಡಲಾಗುವುದು ಎಂದವರು ಹೇಳಿದರು.
ಕಾರ್ಯಕ್ರಮದಲ್ಲಿ ಕೊಂಕಣಿ ಗಮಕ, ಸುಕಿದಾಡ್, ಚಿಂತನ್ ಝರ,ವ್ಹಡ್ಲೆಂ ಫೆಸ್ತ್ ಕೃತಿಯನ್ನು , ಪೀಠದ ಕಾರ್ಯ ಯೋಜನೆಯನ್ನು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಶ್ರೇಷ್ಠ ಕೊಂಕಣಿ ಶಿಕ್ಷಕ ಪುರಸ್ಕಾರ ಪ್ರದಾನ ಮಾಡಲಾಯಿತು. ಕೊಂಕಣಿ ಜನರ ಪರವಾಗಿ ದ.ಕ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅವರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ರೊಯ್ ಕ್ಯಾಸ್ತೆಲಿನೊ ವಹಿಸಿದ್ದರು. ಸಮಾರಂಭದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಡಾ.ಬಿ. ದೇವದಾಸ ಪೈ , ಕೊಂಕಣಿ ಅಧ್ಯಯನ ಪೀಠದ ಸಂಯೋಜಕ ಡಾ.ಜಯವಂತ ನಾಯಕ್ ಉಪಸ್ಥಿತರಿದ್ದರು.





