ಆರೋಗ್ಯಕರ ಪರಿಸರಕಾ್ಕಗಿ ಜನಜಾಗೃತಿ ಅಗತ್ಯ: ಲೀಲಾಬಾಯಿ ಠಾಣೇಕರ
ವಿಶ್ವ ಆರೋಗ್ಯ ದಿನಾಚರಣೆ

ಕಾರವಾರ, ಎ.7: ಅನಾರೋಗ್ಯಕರ ಆಹಾರ ಸೇವನೆ ಮತ್ತು ನಮ್ಮ ಸುತ್ತಮುತ್ತಲಿನ ಅನೈರ್ಮಲ್ಯ ಭರಿತ ಪರಿಸರದಿಂದಾಗಿ ರೋಗಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸಲು ಪ್ರತಿಯೊಬ್ಬ ನಾಗರಿಕನು ಜಾಗೃತರಾಗುವ ಆವಶ್ಯಕತೆ ಇದೆ ಎಂದು ನಗರಸಭೆ ಉಪಾಧ್ಯಕ್ಷೆ ಲೀಲಾಬಾಯಿ ಠಾಣೇಕರ ಹೇಳಿದರು.
ನಗರದ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಗುರುವಾರ ನಡೆದ ವಿಶ್ವ ಆರೋಗ್ಯ ದಿನಾಚರಣಾ ಕಾರ್ಯಕ್ರಮದ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮನುಷ್ಯನಿಗೆ ಆರೋಗ್ಯ ಅತೀ ಮುಖ್ಯ. ಅನಾರೋಗ್ಯ ಪೀಡಿತನಾಗಿ ಆಸ್ತಿ ಅಂತಸ್ತನ್ನು ಸಂಪಾದಿಸಲು ಹೊರಟರೆ ಯಾವ ಉಪಯೋಗಕ್ಕೂ ಬರುವುದಿಲ್ಲ. ಜನಸಂಖ್ಯಾ ಸ್ಫೋಟ ರೋಗಗಳಿಗೆ ಮೂಲ ಕಾರಣವಾಗುತ್ತಿದ್ದು, ಇದು ಮೊದಲು ನಿಯಂತ್ರಣವಾಗಬೇಕು ಎಂದು ಅಭಿಪ್ರಾಯಪಟ್ಟರು.
ಮಧುಮೇಹದ ಬಗ್ಗೆ ಉಪನ್ಯಾಸ ನೀಡಿದ ಡಾ. ರಮೇಶ್ ರಾವ್, ದೇಹದಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಗ್ಲುಕೋಸ್ ಇದ್ದಾಗ ಮಧುಮೇಹ ಬರುತ್ತದೆ. ಪ್ಯಾಂಕ್ರಿಯಾಸ್ ಗ್ರಂಥಿಯಿಂದ ಇನ್ಸುಲಿನ್ ಎನ್ನುವ ಹಾರ್ಮೋನ್ ರಕ್ತದ ಸಕ್ಕರೆ ಅಂಶ ಕಡಿಮೆಮಾಡುತ್ತದೆ. ಯಾವುದೋ ಕಾರಣದಿಂದ ಇನ್ಸುಲಿನ್ ಉತ್ಪತ್ತಿಯಲ್ಲಿ ದೋಷದಿಂದ ಅಥವಾ ಇನ್ಸುಲಿನ್ ಹಾರ್ಮೊನ್ ಸರಿಯಾಗಿ ಕಾರ್ಯನಿರ್ವಹಿಸದೇ ಇರುವುದರಿಂದ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗುತ್ತದೆ ಎಂದರು.
ಮಧುಮೇಹ 3 ವಿಧ: ಮೊದಲನೆಯದಾಗಿ ಸಣ್ಣ ಮಕ್ಕಳಲ್ಲಿ ಮತ್ತು ಮಧ್ಯವಯಸ್ಕರಲ್ಲಿ ಕಂಡುಬರುವಂತಹದ್ದು, ಎರಡನೆಯದು ಬೊಜ್ಜು, ವಂಶಪಾರಂಪರಿಕವಾಗಿ, ಜೀವನ ಶೈಲಿಯಿಂದ, ರಕ್ತದ ಒತ್ತಡ ಹೆಚ್ಚಾಗುವುದರಿಂದ, ದೇಹದಲ್ಲಿ ಕೊಬ್ಬಿನ ಅಂಶಹೆಚ್ಚಾಗುವುದರಿಂದ ಬರುತ್ತದೆ. ಮೂರನೆಯದಾಗಿ ಗರ್ಭಾವಸ್ಥೆಯಲ್ಲಿ ಕಾಣಿಸಿಕೊಂಡು ಪ್ರಸವದ ವೇಳೆ ಗುಣಮುಖವಾಗುತ್ತದೆ. ಕೆಲವೊಮ್ಮೆ ಗುಣಮುಖವಾಗದೇ ಉಳಿಯುವ ಸಾಧ್ಯತೆ ಕೂಡಾ ಇರುತ್ತದೆ ಎಂದು ವಿವರಿಸಿದರು.
ನಮ್ಮ ದೇಹದಲ್ಲಿ ಯಾವುದೇ ಬದಲಾವಣೆಗಳು ಕಂಡು ಬಂದಲ್ಲಿ ತಕ್ಷಣ ವೈದ್ಯರಿಗೆ ತೋರಿಸಿ ಮುಂಜಾಗರೂಕರಾಗಿರಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್ ಮಾತನಾಡಿ, ಮಧುಮೇಹ ಪ್ರತಿ 7 ಜನರಲ್ಲಿ ಒಬ್ಬರಿಗೆ ಕಂಡುಬರುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳು ಜಾಗೃತರಾಗಿ ಇವುಗಳ ಬಗ್ಗೆ ಇತರರಿಗೆ ತಿಳಿಸಬೇಕು. ವ್ಯಾಯಾಮ, ಆರೋಗ್ಯಕರ ಆಹಾರ ಪದ್ಧತಿ, ಶರೀರದ ತೂಕ ನಿಯಂತ್ರಣ, ತಂಬಾಕು ಸೇವನೆ ತ್ಯಜಿಸುವುದರಿಂದ ಮಧುಮೇಹ ತಡೆಗಟ್ಟಲು ಸಾಧ್ಯವಿದೆ ಎಂದರು.
ಮೆರವಣಿಗೆ: ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಜಾಥಾದಲ್ಲಿ ನರ್ಸಿಂಗ್ ಹಾಗೂ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಮಧುಮೇಹ ತಡೆಗಟ್ಟುವ ಹಾಗೂ ಸ್ವಚ್ಛತೆ ಕಾಪಾಡುವ ಘೋಷಣೆಗಳನ್ನು ಜನರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಿದರು.
ಭಾರತೀಯ ರೆಡ್‌ಕ್ರಾಸ್ ಘಟಕದ ಜಗದೀಶ್ ಬಿರ್ಕೋಡಿಕರ್, ಕಾಲೇಜಿನ ಪ್ರಾಂಶುಪಾಲ ವಿ.ಎಂ. ಹೆಗಡೆ, ಡಾ. ಶಾಂತಲಾ, ಅನಿಲ ನಾಯ್ಕ, ಖೈರುನ್ನಿಸಾ ಶೇಖ್, ಸೋಮೇಶ್ ಮತ್ತಿತರರು ಉಪಸ್ಥಿತರಿದ್ದರು.







