ಉಳ್ಳಾಲ: ಖಾಸಗಿ ಆಸ್ಪತ್ರೆಯ ಉದ್ಯೋಗಿಯ ಕೊಲೆ
ಉಳ್ಳಾಲ: ವ್ಯಕ್ತಿಯೊಬ್ಬರ ಮೃತದೇಹವೊಂದು ಕೊಣಾಜೆ ಠಾಣಾ ವ್ಯಾಪ್ತಿಯ ನಿತ್ಯಾನಂದ ಬಳಿ ಇರುವ ಲಾಡ್ಜ್‌ವೊಂದರಲ್ಲಿ ಕೊಲೆ ಮಾಡಿದ ಸ್ಥಿತಿಯಲ್ಲಿ ಗುರುವಾರ ಸಂಜೆ ಪತ್ತೆಯಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ತೆರಳಿ ತನಿಖೆ ಮುಂದುವರಿಸಿದ್ದಾರೆ.
ಕೊಲೆಯಾದ ವ್ಯಕ್ತಿಯನ್ನು ಸುಳ್ಯ ನಿವಾಸಿ ಕುಶಾಲಪ್ಪ ಎಂದು ತಿಳಿದು ಬಂದಿದ್ದು, ಇವರು ಖಾಸಗಿ ಆಸ್ಪತ್ರೆಯಲ್ಲಿ ಉದ್ಯೋಗದಲ್ಲಿದ್ದರು ಎನ್ನಲಾಗಿದೆ. ಲಾಡ್ಜ್‌ನಲ್ಲಿ ವಾಸವಿರುವವರಿಗೆ ಗುರುವಾರ ಬೆಳಗ್ಗಿನಿಂದಲೆ ದುರ್ವಾಸನೆ ಬರಲು ಶುರುವಾಗಿದ್ದು, ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲಿಸಿದಾಗ ಲಾಡ್ಜ್‌ನ ಕೊಠಡಿಯೊಂದರಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ವೈಯಕ್ತಿಕ ದ್ವೇಷದಿಂದ ದುಷ್ಕರ್ಮಿಗಳು ಕುಶಾಲಪ್ಪ ಅವರನ್ನು ಎರಡು ದಿನಗಳ ಹಿಂದೆಯೇ ಕೊಲೆ ಮಾಡಿ ಹೋಗಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ. ಲಾಡ್ಜ್‌ನ ಬಾಗಿಲು ಹಾಕಿದ್ದು, ಪೋಲೀಸರು ಒಳ ಹೋಗಿ ನೋಡಿದಾಗ ಕೊಲೆ ಮಾಡಿದ ಕುಶಾಲಪ್ಪರವರ ಮೃತದೇಹ ಕೊಳೆತ ಸ್ಥಿತಿಯಲ್ಲಿತ್ತು. ಮುಖ ಚಿಲ ಹಾಕಿ ಮುಚ್ಚಲಾಗಿತ್ತು. ಕೊಠಡಿಯಲ್ಲಿ ದೊರೆತ ಕೆಲವು ಆಧಾರದಲ್ಲಿ ಬೆಳ್ಳಾರೆ ನಿವಾಸಿ ಕುಶಾಲಪ್ಪರವರ ಮೃತದೇಹ ಎಂದು ಪೊಲೀಸರು ಗುರುತು ಪತ್ತೆ ಹಚ್ಚಿದ್ದಾರೆ.





