ಕಡೂರು ಪಟ್ಟಣದ ಅಭಿವೃದ್ಧಿ ಪಕ್ಷಾತೀತವಾಗಲಿ: ಶಾಸಕ ದತ್ತ
ಕಡೂರು, ಎ. 7: ಪಟ್ಟಣದ ಅಭಿವೃದ್ಧಿಗೆ ಯಾವುದೇ ರಾಜಕೀಯ ಮಾಡದೇ ಪಕ್ಷಾತೀತಾವಾಗಿ ಪುರಸಭೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸಹಕಾರದೊಂದಿಗೆ ಎಲ್ಲ ಸಮಸ್ಯೆಗಳ ನಿವಾರಣೆಗೆ ಪ್ರಯತ್ನ ನಡೆಸಲಾಗುವುದು ಎಂದು ಶಾಸಕ ವೈಎಸ್‌ವಿ. ದತ್ತ ತಿಳಿಸಿದರು.
ಅವರು ಪ್ರವಾಸಿಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ ಕುರಿತು ಸಭೆ ಕರೆದಿದ್ದ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷರು ಮತ್ತು ಸದಸ್ಯರುಗಳು ಕಿರಿಯ ಅಭಿಯಂತರರು ಇಲ್ಲದೆ ಕಾಮಗಾರಿಗಳು ನಡೆಯುತ್ತಿಲ್ಲ, ಪೂರ್ಣಾವಧಿಗೆ ಅಭಿಯಂತರರು ಪುರಸಭೆಗೆ ಅವಶ್ಯಕತೆ ಇದೆ ಎಂದು ಮನವಿ ನೀಡಿದ್ದರ ಮೇರೆಗೆ, ಮುಖ್ಯ ಇಂಜಿನಿಯರ್ ಕಚೇರಿಗೆ ಭೇಟಿ ನೀಡಿ ಕಡೂರು ಪುರಸಭೆಯ ಸ್ಥಿತಿಗತಿಯನ್ನು ವಿವರಿಸಿದಾಗ ಪೂರ್ಣಾವಧಿಗೆ ಕಿರಿಯ ಅಭಿಯಂತರರನ್ನು ನಿಯೋಜನೆಗೊಳಿಸಿ ಆದೇಶ ನೀಡಿರುತ್ತಾರೆ ಎಂದು ಹೇಳಿದರು.
ತಾಲೂಕಿನಲ್ಲಿ ತೀವ್ರ ಬರಗಾಲವಿದೆ. ಕುಡಿಯುವ ನೀರಿಗಾಗಿ ಪ್ರತಿ ಕ್ಷೇತ್ರಕ್ಕೆ ಕೇವಲ 50 ಲಕ್ಷ ರೂ. ಅನುದಾನ ನೀಡಿದೆ. ಈ ಹಣವು ಯಾವುದಕ್ಕೂ ಆಗುವುದಿಲ್ಲ ಪ್ರತಿ ಕ್ಷೇತ್ರಕ್ಕೆ ಕನಿಷ್ಠ 3 ಕೋಟಿ ರೂ. ಹಣವನ್ನು ಸರಕಾರ ನೀಡಬೇಕಿದೆ ಎಂದು ಒತ್ತಾಯಿಸಲಾಗಿದೆ ಎಂದು ನುಡಿದರು.
ತಾಲೂಕಿನಲ್ಲಿ ವಿದ್ಯುತ್ ಅಭಾವ ಇರುವುದರಿಂದ ಕುಡಿಯುವ ನೀರಿಗೆ ತೊಂದರೆಯಾಗಿದ್ದನ್ನು ಮನಗಂಡು ಇಂಧನ ಸಚಿವ ಡಿಕೆ. ಶಿವಕುಮಾರ್‌ರೊಂದಿಗೆ ಗಲಾಟೆ ಮಾಡುವ ಮೂಲಕ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದಾಗ ಸಚಿವರು ಒಂದು ವಾರ ಸಮಯ ತೆಗೆದುಕೊಂಡು ಚೌಳಹಿರಿಯೂರು, ಕುಂಕನಾಡು, ಮರವಂಜಿ, ಹೋಚಿಹಳ್ಳಿ, ಪಂಚನಹಳ್ಳಿ ಭಾಗಗಳಿಗೆ ಹಿರಿಯೂರಿನಿಂದ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಸದ್ಯಕ್ಕೆ ವಿದ್ಯುತ್ ಸಮಸ್ಯೆ ಪರಿಹಾರವಾದಂತಾಗಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಕೋಡಿಹಳ್ಳಿ ಮಹೇಶ್ವರಪ್ಪ, ನಗರ ಘಟಕದ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಸೀಗೆಹಡ್ಲುಹರೀಶ್,ಪಿ.ವಿ. ಸುರೇಂದ್ರಬಾಬು ಉಪಸ್ಥಿತರಿದ್ದರು.







