ತುಳು ಭಾಷೆಯ ಬೆಳವಣಿಗೆಯಲ್ಲಿ ತುಳು ಯಕ್ಷಗಾನದ ಪಾತ್ರ ಪ್ರಮುಖ: ಸರಪಾಡಿ
ಮುಡಿಪು ಕಾಲೇಜಿನಲ್ಲಿ ಯಕ್ಷಮಂಗಳ ಪ್ರಚಾರೋಪನ್ಯಾಸ

ಕೊಣಾಜೆ, ಎ.7: ಯಕ್ಷಗಾನ ಕ್ಷೇತ್ರದಲ್ಲಿ ತುಳು ಯಕ್ಷಗಾನದ ಪಾತ್ರವೂ ಪ್ರಮುಖವಾಗಿದೆ. ಮುಖ್ಯವಾಗಿ ತುಳು ಭಾಷೆಯ ಬೆಳವಣಿಗೆಯಲ್ಲಿ ಮತ್ತು ತುಳುನಾಡಿನ ಸಂಸ್ಕೃತಿಯನ್ನು ಪಸರಿಸುವಲ್ಲಿ ತುಳು ಯಕ್ಷಗಾನದ ಕೊಡುಗೆಯೂ ಇದೆ ಎಂದು ಖ್ಯಾತ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಮುಡಿಪುವಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಯಕ್ಷಮಂಗಳ ಪ್ರಚಾರೋಪನ್ಯಾಸ ಮಾಲಿಕೆಯಲ್ಲಿ ‘ತುಳು ಯಕ್ಷಗಾನ-ಸಾಧ್ಯತೆ ಮತ್ತು ಸವಾಲುಗಳು’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ ಅವರು ಮಾತನಾಡಿದರು. ಮಂಗಳೂರು ವಿವಿ ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕ ಡಾ.ಧನಂಜಯ ಕುಂಬ್ಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಡಿಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಗಿರಿಧರ ರಾವ್ ಎಂ.ಎಸ್., ಕಲೆಯನ್ನು ಆಸ್ವಾದಿಸುವ ಪ್ರವೃತ್ತಿಯನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ಯುವ ಸಮುದಾಯ ಯಕ್ಷಗಾನದ ಆಸಕ್ತಿಯನ್ನು ಬೆಳೆಸಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು. ಯಕ್ಷಗಾನ ಅಧ್ಯಯನ ಕೇಂದ್ರದ ಸತೀಶ್ ಕೊಣಾಜೆ ಉಪಸ್ಥಿತರಿದ್ದರು. ಕಾಲೇಜು ಪ್ರಾಧ್ಯಾಪಕ ಡಾ.ಶ್ರೀಧರ ಮಣಿಯಾಣಿ ಸ್ವಾಗತಿಸಿದರು. ಪ್ರಾಧ್ಯಾಪಕ ನಂದ ಕಿಶೋರ್ ವಂದಿಸಿದರು. ವಿದ್ಯಾರ್ಥಿನಿ ಮಿತುಶ್ರೀ ಕಾರ್ಯಕ್ರಮ ನಿರೂಪಿಸಿದರು.





