ಸಾರ್ವಜನಿಕರು ತೆರಿಗೆ ಪಾವತಿಸಲು ಸಹಕರಿಸಿ
ಬಿಬಿಎಂಪಿ ಮನವಿ

ಬೆಂಗಳೂರು, ಎ. 7: ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆಯನ್ನು ಹದಿನೈದು ವರ್ಷಗಳ ನಂತರ ಪರಿಷ್ಕರಿಣೆ ಮಾಡಲಾಗಿದೆ. ವಲಯವಾರು ವರ್ಗೀಕೃತ ದರಗಳನ್ನು ವಿಧಿಸಲಾಗಿದೆ. ಹೀಗಾಗಿ ತೆರಿಗೆ ಹೊರೆ ಅಂತ ಭಾವಿಸಿದೆ. ಸಾರ್ವಜನಿಕರು ತೆರಿಗೆ ಪಾವಿತಿಸಲು ಸಹಕರಿಸಬೇಕು ಎಂದು ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆಯ ಕಂದಾಯ ವಿಭಾಗದ ಉಪಾಯುಕ್ತ ವೆಂಕಟಾಚಲಪತಿ ಮನವಿ ಮಾಡಿದ್ದಾರೆ.
ಗುರುವಾರ ಪಾಲಿಕೆ ಸಭಾಂಗಣದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಸ್ತಿ ತೆರಿಗೆ ಪಾವತಿಯನ್ನು ವೈಜ್ಞಾನಿಕ ರೀತಿಯಲ್ಲಿ ಪಾವತಿ ಮಾಡಲು ಆನ್‌ಲೈನ್ ವ್ಯವಸ್ಥೆಯನ್ನು ಎ.4ರಿಂದ ಆರಂಭಿಸಲಾಗಿದೆ. ಆದರೆ ತಾಂತ್ರಿಕ ದೋಷಗಳಿಂದ ತೆರಿಗೆಯನ್ನು ಪಾವತಿಸಲು ಕೆಲ ಸಂದರ್ಭದಲ್ಲಿ ಸಾರ್ವಜನಿಕರಿಗೆ ಅಡಚಣೆಯಾಗಿದೆ ಎಂದು ಹೇಳಿದರು.
ಇನ್ನು ಒಂದು ವಾರದೊಳಗೆ ಈ ಎಲ್ಲ ದೋಷಗಳನ್ನು ನಿವಾರಣೆ ಮಾಡಲಾಗುವುದು. ಅಲ್ಲಿಯವರೆಗೂ ಡಿಡಿ ಮತ್ತು ಚೆಕ್‌ಗಳ ಮೂಲಕವು ತೆರಿಗೆಯನ್ನು ಪಾವತಿಸಲು ಅವಕಾಶ ನೀಡಲಾಗಿದೆ. ತೆರಿಗೆ ಹೆಚ್ಚು ಭಾರ ಎಂದು ಭಾವಿಸದೆ ಆದಷ್ಟೂ ಬೇಗ ಸಾರ್ವಜನಿಕರು ತೆರಿಗೆಯನ್ನು ಪಾವತಿಸಲು ಸಹಕರಿಸಬೇಕು ಎಂದು ಹೇಳಿದರು.
ನೂತನ ತೆರಿಗೆ ಪರಿಷ್ಕರಣೆಯ ನಂತರ ವಲಯವಾರು ಆಧಾರದಲ್ಲಿ ತೆರಿಗೆ ದರಗಳನ್ನು ವಿಧಿಸಲಾಗಿದೆ. ಅಲ್ಲದೆ, ವಸತಿ ಮತ್ತು ವಸತಿಯೇತರ ವಿಭಾಗಗಳಲ್ಲಿ ತೆರಿಗೆಯನ್ನು ವರ್ಗೀಕರಿಸಲಾಗಿದೆ ಎಂದು ಹೇಳಿದ ಅವರು, ಎ.4ರಿಂದ ಇದುವರೆಗೂ 3,800 ಮಂದಿ ಎರಡು ಕೋಟಿ ರೂ. ಅಧಿಕ ತೆರಿಗೆಯನ್ನು ಆನ್‌ಲೈನ್‌ನಲ್ಲಿ ಪಾವತಿಸಿದ್ದಾರೆ. ಕಳೆದೆ ಬಾರಿ 1,956 ಕೋಟಿ ರೂ. ಸಂಗ್ರಹಿಸಲಾಗಿತ್ತು. ಈ ಸಾಲಿನಲ್ಲಿ 2,500 ಕೋಟಿ ರೂ. ಸಂಗ್ರಹಿಸುವ ಗುರಿಯಿದೆ ಎಂದು ಮಾಹಿತಿ ನೀಡಿದರು.







