ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಅರ್ಜಿ ಆಹ್ವಾನ
ಬೆಂಗಳೂರು, ಎ.7: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರತಿಷ್ಠಿತ ಶಾಲೆಗಳಿಗೆ ದಾಖಲು ಮಾಡಿ, ಉನ್ನತ ಮಟ್ಟದ ಶಿಕ್ಷಣ ಕೊಡಿಸುವ ಉದ್ದೇಶದಿಂದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಶಾಲೆಗಳಿಗೆ ಭರಿಸಬೇಕಾದ ಎಲ್ಲಾ ಶುಲ್ಕ, ಸಮವಸ್ತ್ರ, ಪಠ್ಯಪುಸ್ತಕ, ಪ್ರವಾಸಭತ್ತೆ ಮತ್ತು ವಸತಿ, ಭೋಜನಾ ವೆಚ್ಚ ಹಾಗೂ ಇತರೆ ವೆಚ್ಚವನ್ನು ಸಮಾಜ ಕಲ್ಯಾಣ ಇಲಾಖೆಯಿಂದ ಭರಿಸಲಾಗುವುದು.
ಆರನೆ ತರಗತಿಯ ಆಂಗ್ಲ ಮಾಧ್ಯಮಕ್ಕೆ ಸೇರಬಯಸುವ ವಿದ್ಯಾರ್ಥಿಯು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸೇರಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಾಗಿರಬೇಕು. 2015-16ನೆ ಸಾಲಿನಲ್ಲಿ 5ನೆ ತರಗತಿಯಲ್ಲಿ ಶೇ.60ಕ್ಕಿಂತ ಹೆಚ್ಚು ಅಂಕ ಗಳಿಸಿರಬೇಕು, ವಾರ್ಷಿಕ ವರಮಾನ 2 ಲಕ್ಷ ರೂ.ಗಳ ಒಳಗಿರಬೇಕು, ತಹಶೀಲ್ದಾರ್‌ರವರಿಂದ ಪಡೆದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸಲ್ಲಿಸಬೇಕು.
ಪ್ರತಿಷ್ಠಿತ ಶಾಲೆಗಳಿಗೆ ಒಮ್ಮೆ ದಾಖಲಾದ ವಿದ್ಯಾರ್ಥಿಗಳು 10 ಅಥವಾ 12ನೆ ತರಗತಿಯವರೆಗೆ ದಾಖಲಾದ ವಿದ್ಯಾ ಸಂಸ್ಥೆಯಲ್ಲಿಯೇ ಕಡ್ಡಾಯವಾಗಿ ವ್ಯಾಸಂಗ ಮಾಡಬೇಕು, ಭರ್ತಿ ಮಾಡಿದ ಅರ್ಜಿಗಳನ್ನು ಮೇ.4 ರೊಳಗೆ ಸಲ್ಲಿಸಬೇಕು. ಅರ್ಜಿ ನಮೂನೆ ಹಾಗೂ ಹೆಚ್ಚಿನ ವಿವರಗಳಿಗೆ ಉಪನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹಾಗೂ ಆಯಾ ತಾಲೂಕು ಸಮಾಜ ಕಲ್ಯಾಣ ಇಲಾಖೆ ಮತ್ತು ಆಯಾ ತಾಲೂಕಿನ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಪಡೆಯಬಹುದಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.







