ಬಿಡಬ್ಲುಎಫ್ ರ್ಯಾಂಕಿಂಗ್: ಸೈನಾ, ಶ್ರೀಕಾಂತ್‌ಗೆ ಹಿನ್ನಡೆ
ಹೊಸದಿಲ್ಲಿ, ಎ.7: ಕಳೆದ ವಾರ ಇಂಡಿಯಾ ಓಪನ್ ಸೂಪರ್ ಸರಣಿಯಲ್ಲಿ ಸಿಂಗಲ್ಸ್ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ವಿಫಲರಾಗಿರುವ ಸೈನಾ ನೆಹ್ವಾಲ್ ಹಾಗೂ ಕೆ.ಶ್ರೀಕಾಂತ್ ಗುರುವಾರ ಇಲ್ಲಿ ಬಿಡುಗಡೆಯಾಗಿರುವ ಬಿಡಬ್ಲುಎಫ್ ರ್ಯಾಂಕಿಂಗ್‌ನಲ್ಲಿ ಹಿಂಭಡ್ತಿ ಪಡೆದಿದ್ದಾರೆ.
ಇಂಡಿಯಾ ಓಪನ್‌ನ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ್ದ ಸೈನಾ 2 ಸ್ಥಾನ ಕಳೆದುಕೊಂಡು 8ನೆ ಸ್ಥಾನಕ್ಕೆ ಕುಸಿದಿದ್ದಾರೆ. ಪುರುಷರ ಸಿಂಗಲ್ಸ್ ರ್ಯಾಂಕಿಂಗ್‌ನಲ್ಲಿ ನಾಲ್ಕು ಸ್ಥಾನ ಕುಸಿತಕಂಡಿರುವ ಶ್ರೀಕಾಂತ್ 14ನೆ ಸ್ಥಾನದಲ್ಲಿದ್ದಾರೆ.
ಇಂಡಿಯಾ ಓಪನ್ ಹಾಗೂ ಈಗ ನಡೆಯುತ್ತಿರುವ ಮಲೇಷ್ಯಾ ಸೂಪರ್ ಸರಣಿಯಲ್ಲಿ ಮೊದಲ ಸುತ್ತಿನಲ್ಲೆ ಎಡವಿರುವ ಶ್ರೀಕಾಂತ್ ರ್ಯಾಂಕಿಂಗ್‌ನಲ್ಲಿ ಭಾರೀ ಕುಸಿತ ಕಂಡಿದ್ದಾರೆ. ಸ್ವಿಸ್ ಓಪನ್ ಚಾಂಪಿಯನ್ ಎಚ್‌ಎಸ್ ಪ್ರಣಯ್ ಮೂರು ಸ್ಥಾನ ಕೆಳಜಾರಿ 22ನೆ ಸ್ಥಾನಕ್ಕೆ ಕುಸಿದಿದ್ದಾರೆ. ಕಳೆದ ಒಂದು ವರ್ಷದಿಂದ ನಿರಂತರವಾಗಿ ಗಾಯದ ಸಮಸ್ಯೆ ಎದುರಿಸುತ್ತಿರುವ ಪಿ.ಕಶ್ಯಪ್ ವಿಶ್ವ ರ್ಯಾಂಕಿಂಗ್‌ನಲ್ಲಿ 18ನೆ ಸ್ಥಾನಕ್ಕೆ ಕುಸಿದಿದ್ದಾರೆ.
ಪುರುಷರ ಡಬಲ್ಸ್‌ನಲ್ಲಿ ಮನು ಅತ್ರಿ ಹಾಗೂ ಸುಮೀತ್ ರೆಡ್ಡಿ 19ನೆ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ ಮಹಿಳೆಯರ ಡಬಲ್ಸ್‌ನಲ್ಲಿ 15ನೆ ಸ್ಥಾನದಲ್ಲಿದ್ದಾರೆ.







