ಮೌಲ್ಯಮಾಪನಕ್ಕೆ ಚ್ಯುತಿಯಾಗದು: ಧರಣಿನಿರತ ಉಪನ್ಯಾಸಕರ ಭರವಸೆ
ಮಂಗಳೂರು, ಎ.7: ವೇತನ ತಾರತಮ್ಯ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸುಮಾರು 20 ವರ್ಷಗಳಿಂದ ಹೋರಾಟ ನಡೆಸುತ್ತಿರುವ ಪದವಿ ಪೂರ್ವ ಉಪನ್ಯಾಸಕರು ಸರಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಮೌಲ್ಯ ಮಾಪನವನ್ನು ಬಹಿಷ್ಕರಿಸಿ ಹೋರಾಟ ನಡೆಸುತ್ತಿದ್ದು, ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ಉಡುಪಿ ಮತ್ತು ದ.ಕ. ಜಿಲ್ಲಾ ಪದವಿ ಪೂರ್ವ ಉಪನ್ಯಾಸಕರು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಕುಮಾರ ನಾಯಕ್ ವರದಿ ಜಾರಿಗೊಳಿಸಬೇಕೆಂದು ಆಗ್ರಹಿಸಿದ ದ.ಕ. ಮತ್ತು ಉಡುಪಿ ಜಿಲ್ಲಾ ಉಪನ್ಯಾಸಕರ ಸಂಘದ ಪ್ರತಿನಿಧಿಗಳು, ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕಾಳಜಿ ತಮಗಿದ್ದು, ಯಾವುದೇ ರೀತಿಯಲ್ಲಿ ವೌಲ್ಯಮಾಪನಕ್ಕೆ ಚ್ಯುತಿಯಾಗುವುದಿಲ್ಲ ಎಂದು ಭರವಸೆ ನೀಡಿದರು.
ದ.ಕ. ಜಿಲ್ಲಾ ಪಪೂ ಪ್ರಾಂಶುಪಾಲರ ಸಂಘದ ಅಧ್ಯಕ್ಷೆ ಸರಸ್ವತಿ ಬಿ. ಮಾತನಾಡಿ, 1998ರಲ್ಲಿ ಪಪೂ ಕಾಲೇಜು ಉಪನ್ಯಾಸಕರ ಆರಂಭಿಕ ಮೂಲ ವೇತನವನ್ನು ಉಪನ್ಯಾಸಕರಿಗೆ ಸರಿ ಸಮಾನವಾದ ತಹಶೀಲ್ದಾರ್‌ಗಿಂತ 1,400 ರೂ.ಕಡಿಮೆ ನಿಗದಿಪಡಿಸಲಾಗಿತ್ತು. 2007ರಲ್ಲಿಯೂ ಆಗಿನ ಸರಕಾರ ಮೂಲವೇತನದಲ್ಲಿ ತಹಶೀಲ್ದಾರ್ ಮತ್ತು ಉಪನ್ಯಾಸಕರ ನಡುವೆ 2,650 ರೂ.ಗಳ ತಾರತಮ್ಯ ಮಾಡಿತ್ತು. 2012ರಲ್ಲಿ ಮತ್ತೆ 5,300 ರೂ.ಗಳಷ್ಟು ಅನ್ಯಾಯ ಮಾಡಿದೆ. (ಪಪೂ ಉಪನ್ಯಾಸಕರಿಗೆ ಮೂಲ ವೇತನ 22,800 ರೂ.ಗಳಾಗಿದ್ದರೆ ಸಮಾನ ಹುದ್ದೆಯ ತಹಶೀಲ್ದಾರರಿಗೆ 28,100 ರೂ.ಗಳನ್ನು ನೀಡಲಾಯಿತು) 18 ವರ್ಷಗಳಿಂದ ವೇತನ ಅನ್ಯಾಯವನ್ನು ಸರಿಪಡಿಸುವಂತೆ ಕೋರಿ ಹೋರಾಟ ನಡೆಸಲಾಗುತ್ತಿದ್ದರೂ ಭರವಸೆ ನೀಡಲಾಗುತ್ತಿದೆಯೇ ಹೊರತು ಈಡೇರಿಸಲಾಗುತ್ತಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಉಪನ್ಯಾಸಕರ ಬೇಡಿಕೆಯ ಹಿನ್ನೆಲೆಯಲ್ಲಿ ಐಎಎಸ್ ಅಧಿಕಾರಿ ಜಿ. ಕುಮಾರ್ ನಾಯಕ್ ನೇತೃತ್ವದ ಸಮಿತಿ ರಚಿಸಲಾಗಿತ್ತು.
ಸಮಿತಿಯು ಆರಂಭಿಕ ಮೂಲ ವೇತನದಲ್ಲಿ ಆಗಿರುವ 5,300 ರೂ.ಗಳ ವ್ಯತ್ಯಾಸ ಗುರುತಿಸಿ ಬೇಡಿಕೆ ಈಡೇರಿಸಲು ಶಿಫಾರಸು ಮಾಡಿತ್ತು. ಆದರೆ ಬೇಡಿಕೆ ಈಡೇರಿಸಲಾಗಿಲ್ಲ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ನವೆಂಬರ್‌ನಿಂದ ನಾಲ್ಕು ಬಾರಿ ವಿವಿಧ ರೀತಿಯ ಹೋರಾಟ ನಡೆಸುತ್ತಿದ್ದರೂ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ವೌಲ್ಯಮಾಪನ ಬಹಿಷ್ಕಾರ ಮತ್ತು ಧರಣಿ ನಡೆಸಲಾಗುತ್ತಿದೆ. ನಮಗಾಗಿರುವ ಅನ್ಯಾಯವನ್ನು ಪೋಷಕರು ಮತ್ತು ವಿದ್ಯಾರ್ಥಿಗಳು ಅರ್ಥಮಾಡಿಕೊಂಡು ತಮ್ಮ ಜೊತೆ ಸಹಕರಿಸಬೇಕು ಎಂದವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ದುಗ್ಗಪ್ಪ, ದ.ಕ ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಚೆರಿಯನ್, ಉಡುಪಿ ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಬಿ. ನಿಂಗಯ್ಯ, ಇತಿಹಾಸ ವೇದಿಕೆಯ ಅಧ್ಯಕ್ಷ ಜಯರಾಂ ಪೂಂಜ ಮತ್ತಿತರರರು ಉಪಸ್ಥಿತರಿದ್ದರು.







