ಕೃಷಿವಲಯಕ್ಕೆ ಸೇರ್ಪಡೆಗೊಂಡ ಕ್ರಿಕೆಟ್
ಮುಂಬೈಯ ಥಾಣೆಯಲ್ಲಿ ನೀರಿನ ಹಾಹಾಕಾರ ಎಷ್ಟು ಭೀಕರವಾಗಿದೆ ಎಂದರೆ ಇಲ್ಲಿ ಎರಡು ಕ್ಯಾನ್ ನೀರಿಗಾಗಿ ಮಹಿಳೆಯರು 10 ಕಿಲೋಮೀಟರ್ ಪ್ರಯಾಣ ಮಾಡಬೇಕಾಗುತ್ತದೆ. ಅದೂ ಕುಡಿಯುವ ನೀರಿಗಾಗಿ. ಥಾಣೆಯ ಜನರು ಕುಡಿಯುವ ನೀರನ್ನು ಬಿಂದುಗಳ ಲೆಕ್ಕದಲ್ಲಿ ಜೋಪಾನ ಮಾಡುತ್ತಿರುವಾಗಲೇ, ಇದೇ ಮುಂಬೈಯ ಮಗದೊಂದು ಕಡೆ ಸಾವಿರಾರು ಲೀಟರ್ ನೀರನ್ನು ವ್ಯರ್ಥ ಚೆಲ್ಲಲಾಗುತ್ತದೆ. ಅದೂ ಎಷ್ಟೋ ದೂರದಿಂದ ನೀರನ್ನು ಚೆಲ್ಲುವುದಕ್ಕಾಗಿಯೇ ತರಲಾಗುತ್ತದೆ. ಮುಂಬೈ ಮಾತ್ರವಲ್ಲ, ಇಡೀ ದೇಶದಲ್ಲೇ ನೀರಿನ ಬರಗಾಲ ಎದುರಾಗುತ್ತಿದೆ. ಕುಡಿಯುವುದಕ್ಕೇ ನೀರಿಲ್ಲ ಎಂದ ಮೇಲೆ ಕೃಷಿಗಳಿಗೆ ನೀರು ಎಲ್ಲಿಂದ ತರುವುದು. ಆದರೂ ಮುಂಬೈಯಲ್ಲಿ ಲೀಟರ್‌ಗಟ್ಟಲೆ ನೀರನ್ನು ಚೆಲ್ಲುವುದಕ್ಕಾಗಿಯೇ ಸಂಗ್ರಹಿಸಿಡಲಾಗಿದೆ. ಆ ಮೂಲಕ ಇವರು ಯಾವ ಕೃಷಿಯನ್ನು ಮಾಡುತ್ತಿದ್ದಾರೆ ಎಂದು ಕೇಳುವಂತಿಲ್ಲ. ಇವರದು ದುಡ್ಡಿನ ಕೃಷಿ. ಕ್ರಿಕೆಟ್ ಎನ್ನುವ ಕೃಷಿಯ ಮೂಲಕ ದುಡ್ಡಿನ ಕೊಯ್ಲನ್ನು ಕೊಯ್ಯಲು ಹೊರಟಿರುವ ಇವರು, ಅದಕ್ಕಾಗಿಯೇ ಸಾವಿರಾರು ಲೀಟರ್ ನೀರನ್ನು ಪಿಚ್‌ಗೆ ಚೆಲ್ಲುತ್ತಿದ್ದಾರೆ. ಕ್ರಿಕೆಟ್ ಪಿಚ್ ಎಂದರೆ, ಹಣ ಬೆಳೆಯುವ ಜಾಗ. ಒಂದೆಡೆ ಕುಡಿಯುವುದಕ್ಕೆ ನೀರೇ ಇಲ್ಲದೆ ಜನರು ಆಕಾಶ ನೋಡುತ್ತಿದ್ದರೆ, ಕ್ರಿಕೆಟ್ ಪಿಚ್‌ಗಾಗಿ ಇವರು ನೀರು ಚೆಲ್ಲುತ್ತಿದ್ದಾರೆ. ಇದೀಗ ಮಹಾರಾಷ್ಟ್ರ ಹೈಕೋರ್ಟ್ ಈ ಕುರಿತಂತೆ ಕ್ರಿಕೆಟ್ ಮಂಡಳಿಗೆ ಚಾಟಿ ಬೀಸಿದೆ. ಒಂದೆಡೆ ಜನರು ಕುಡಿಯಲು ನೀರಿಲ್ಲದೆ ನರಳುತ್ತಿರುವಾಗ, ಹೀಗೆ ನೀರನ್ನು ಪೋಲು ಮಾಡುವುದು ಎಷ್ಟು ಸರಿ? ಎಂದು ನ್ಯಾಯಾಲಯ ಕೇಳಿದೆ. ನೀರು ಎನ್ನುವುದು ಜೀವ ಜಲ. ಕೃಷಿ ಪ್ರಧಾನ ದೇಶವೊಂದರಲ್ಲಿ ನೀರನ್ನು ಅನವಶ್ಯ ಪೋಲು ಮಾಡುವುದೆಂದರೆ ಅದು ಹತ್ಯಾಕಾಂಡಕ್ಕೆ ಸಮ. ಒಂದೆಡೆ ಕೃಷಿಕರು ನೀರು ಕೇಳಿದರೆ ಸರಕಾರ ಕೈ ಚೆಲ್ಲುತ್ತದೆ. ಬಾಯಾರಿದವರು ನೀರು ಕೇಳಿದರೂ ಸರಕಾರದ ಬಳಿ ಕೊಡುವುದಕ್ಕೆ ನೀರಿಲ್ಲ. ಇದೇ ಸಂದರ್ಭದಲ್ಲಿ ಕ್ರಿಕೆಟ್ ಎನ್ನುವ ಮೋಜಿನ ಆಟಕ್ಕೆ ವ್ಯರ್ಥವಾಗಿ ಚೆಲ್ಲಲು ಸರಕಾರದ ಬಳಿ ನೀರಿದೆ. ತಾವು ಬಳಸುತ್ತಿರುವುದು ಕುಡಿಯುವುದಕ್ಕೆ ಅಯೋಗ್ಯವಾದ ನೀರು ಎಂದು ಕ್ರಿಕೆಟ್ ಮಂಡಳಿ ಹೇಳಿದೆಯಾದರೂ, ಅಂತಹ ನೀರಿನ ಅಗತ್ಯವಿರುವ ಸಹಸ್ರಾರು ಕೃಷಿಕರು ಮಹಾರಾಷ್ಟ್ರದಲ್ಲೇ ಇದ್ದಾರೆ. ಅವರು ಬಿತ್ತಿ ಬೆಳೆದ ಕೃಷಿ ಭೂಮಿ ಸುಟ್ಟು ಹೋಗುತ್ತಿರುವಾಗ ಈ ನೀರು ಅವರ ಪಾಲಿಗೆ ಅಮೃತವಾಗಬಹುದು. ಇದೇ ಸಂದರ್ಭದಲ್ಲಿ ಬರಪೀಡಿತ ಪ್ರದೇಶಗಳ ಬಗ್ಗೆ ಸರಕಾರ ಗಾಢ ನಿರ್ಲಕ್ಷವಹಿಸಿದೆ ಎಂದು ಸುಪ್ರೀಂಕೋರ್ಟ್ ಬುಧವಾರ ಕೇಂದ್ರಕ್ಕೆ ತಪರಾಕಿ ನೀಡಿದೆ. ಈ ಬಗ್ಗೆ ವಿಚಾರಣೆ ನಡೆಸುವುದಕ್ಕೆ ನ್ಯಾಯಾಲಯ ಮುಂದಾದರೆ, ಸರಕಾರದ ವಕೀಲರು ಗೈರು ಹಾಜರಾಗುತ್ತಾರೆ. ಅಂದರೆ, ಸರಕಾರ ಬರಗಾಲದಂತಹ ವಿಷಯವನ್ನು ಎಷ್ಟು ಗಂಭೀರವಾಗಿ ಸ್ವೀಕರಿಸಿದೆ ಎನ್ನುವುದಕ್ಕೆ ಇದು ಉದಾಹರಣೆಯಾಗಿದೆ. ಇಂತಹ ಸರಕಾರ, ಕೃಷಿ ಎಂದರೆ ಕ್ರಿಕೆಟ್ ಎಂದು ತಿಳಿದಿದ್ದರೆ ಅದರಲ್ಲಿ ಅಚ್ಚರಿಯೇನಿಲ್ಲ. ಹೀಗೆ ಮುಂದುವರಿದರೆ, ಮುಂದಿನ ದಿನಗಳಲ್ಲಿ ಕ್ರಿಕೆಟ್ ತಾರೆಯರು ಸಂಗ್ರಹಿಸಿದ ರನ್‌ಗಳನ್ನೇ ಅಕ್ಕಿಯೆಂದು ತಿಳಿದು, ಬೇಯಿಸಿ ತಿನ್ನಬೇಕಾದ ದಿನಗಳು ಬರುತ್ತದೆ. ಆಹಾರ ಭದ್ರತೆ ಎಂದು ರನ್‌ಗಳನ್ನೇ ಗೋದಾಮಿನಲ್ಲಿ ಸಂಗ್ರಹಿಸಿಟ್ಟು, ಅದನ್ನೇ ಜನರಿಗೆ ವಿತರಿಸಬೇಕಾಗುತ್ತದೆ. ಇದು ಮುಂಬೈಗೇ ಸೀಮಿತವಾಗಬೇಕಾಗಿಲ್ಲ. ಬೇಸಿಗೆ ಬಂದಾಕ್ಷಣ, ಎಲ್ಲ ಜಿಲ್ಲಾಡಳಿತಗಳೂ ಹರಿಯುವ ನದಿಗಳಿಗೆ ಕಾವಲು ನಿಲ್ಲಿಸುತ್ತವೆ. ಜಿಲ್ಲಾಧಿಕಾರಿಗಳು ಮೊತ್ತ ಮೊದಲು ರೈತರನ್ನು ನೀರಿನ ಕಳ್ಳರೋ ಎಂಬಂತೆ ನೋಡುತ್ತದೆ.‘‘ನದಿ ನೀರನ್ನು ಯಾವ ರೀತಿಯಲ್ಲೂ ಕೃಷಿಗೆ ಬಳಸಬಾರದು’’ ಎಂದು ನೋಟಿಸ್ ನೀಡುತ್ತದೆ. ಆದರೆ ಇದೇ ಸಂದರ್ಭದಲ್ಲಿ ಬೃಹತ್ ಉದ್ಯಮಗಳಿಗೆ ಸದ್ದಿಲ್ಲದೆ ನೀರು ಪೂರೈಕೆಯಾಗುತ್ತಿರುತ್ತದೆ. ಕೃಷಿ ಮುಖ್ಯವೋ, ಉದ್ಯಮ ಮುಖ್ಯವೋ ಎಂಬ ಆಯ್ಕೆಯಲ್ಲಿ ಉದ್ಯಮಗಳೇ ಪ್ರಾಮುಖ್ಯತೆಯನ್ನು ಪಡೆಯುತ್ತವೆೆ. ಇಂತಹ ವಾತಾವರಣದಲ್ಲಿ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ‘ಇನ್ನೊಂದು ಹಸಿರು ಕ್ರಾಂತಿ’ಯಾಗಬೇಕು ಎಂದು ಕರೆ ನೀಡುತ್ತಾರೆ. ಈ ದೇಶದ ಜಲನೀತಿಯ ಪ್ರಕಾರ ನೀರಿನ ಮೊದಲ ಆದ್ಯತೆ ಜನಬಳಕೆಗೆ ಇರಬೇಕು. ಅಂದರೆ ನೀರು ಮೊದಲು ಕುಡಿಯುವುದಕ್ಕಾಗಿ ಪೂರೈಕೆಯಾಗಬೇಕು. ಇದಾದ ಬಳಿಕ, ಆದ್ಯತೆಯನ್ನು ಪಡೆಯುವುದು ಕೃಷಿ. ಯಾವ ರೀತಿಯಲ್ಲೂ ಕೃಷಿ ಬೆಳೆಗಳು ನಾಶವಾಗದಂತೆ ಅವುಗಳಿಗೆ ನೀರನ್ನು ಪೂರೈಸುವುದು ಜಿಲ್ಲಾಡಳಿತದ ಕರ್ತವ್ಯವಾಗುತ್ತದೆ. ಮೂರನೆ ಹಂತವಾಗಿ ನೀರನ್ನು ಉದ್ಯಮಗಳು, ಕೈಗಾರಿಕೆಗಳು ಬಳಸಬಹುದು. ಆದರೆ ಸದ್ಯದ ದಿನಗಳಲ್ಲಿ ಈ ನೀತಿ ಸಂಪೂರ್ಣ ತಿರುಗಾ ಮುರುಗಾ ಆಗಿ ಬಿಟ್ಟಿದೆ. ಇಂದು ಬೇಸಿಗೆಯ ಹೊತ್ತಿನಲ್ಲಿ ಬೃಹತ್ ಉದ್ಯಮಿಗಳು ಸಕಲ ಲಾಬಿ ಮಾಡಿ ತಮಗೆ ಬೇಕಾದ ನೀರನ್ನು ನದಿಗಳಿಂದ ಬಳಸುತ್ತಾರೆ. ಈ ಉದ್ಯಮಿಗಳಿಗೆ ನೀಡಿ ಉಳಿದ ನೀರನ್ನು ಸರಕಾರ ಜನರಿಗೆ ಕುಡಿಯುವುದಕ್ಕಾಗಿ ಪೂರೈಸುತ್ತದೆ. ಈ ಸಂದರ್ಭದಲ್ಲಿ ಕೃಷಿಕರೇನಾದರೂ ನದಿಯ ನೀರನ್ನು ಮುಟ್ಟಿದ್ದೇ ಆದರೆ, ಅವರ ಮೇಲೆ ಯಾವ ದಾಕ್ಷಿಣ್ಯವೂ ಇಲ್ಲದೆ ಪ್ರಕರಣ ದಾಖಲಿಸುತ್ತದೆ. ನೀರು ಪ್ರಕೃತಿ ದತ್ತವಾದುದು. ಮನುಷ್ಯನ ಅತೀ ಲಾಲಸೆಯಿಂದಾಗಿಯೇ ನೀರಿನ ಅಭಾವ ಹೆಚ್ಚು ಹೆಚ್ಚು ತಲೆದೋರುತ್ತಿದೆ. ಪೆಪ್ಸಿ, ಕೋಲಾಗಳಂತಹ ಕಂಪೆನಿಗಳು ಈ ನೆಲದ ಅಂತರ್ಜಲಗಳಿಗೇ ಕನ್ನ ಹಾಕಿ, ಭೂಮಿಯನ್ನು ಬರಿದು ಗೊಳಿಸುತ್ತಿವೆ. ಇಂತಹ ಸಂದರ್ಭದಲ್ಲಿ ನೀರು ವಾಣಿಜ್ಯ ಕಾರಣಗಳಿಗೆ ಹೆಚ್ಚು ಹೆಚ್ಚು ಬಳಕೆಯಾಗುವುದನ್ನು ತಡೆದು, ಆ ನೀರನ್ನು ಕೃಷಿವಲಯಕ್ಕೆ ವರ್ಗಾಯಿಸುವುದು ಸರಕಾರದ ಕರ್ತವ್ಯವಾಗಿದೆ. ಹಾಗೆಯೇ ಕುಡಿಯುವ ನೀರಿಗಾಗಿಯೇ ಜನರು ತಹತಹಿಸುತ್ತಿರುವಾಗ ಕ್ರಿಕೆಟ್‌ನಂತಹ ಮೋಜಿನಾಟಕ್ಕೆ ನೀರನ್ನು ಚೆಲ್ಲುವುದು ಸಾಮಾಜಿಕ ಅಪರಾಧವಾಗಿದೆ. ಇಂತಹ ಪೋಲುಗಳು ಯಾವ ಕ್ಷೇತ್ರಗಳಲ್ಲಿ ನಡೆದರೂ ಅದರ ವಿರುದ್ಧ ಸರಕಾರ ಕ್ರಮ ಕೈಗೊಳ್ಳಬೇಕು. ಇದೇ ಸಂದರ್ಭದಲ್ಲಿ ಕೃಷಿಕರು ನದಿಗಳಿಂದ ನೀರನ್ನು ಬಳಸುವ ಸಂದರ್ಭದಲ್ಲಿ ಸರಕಾರ ಹೆಚ್ಚು ಔದಾರ್ಯವನ್ನು ತೋರಬೇಕು. ಯಾವ ಕಾರಣಕ್ಕೂ ಕೃಷಿ ಮತ್ತು ಜನೋಪಯೋಗದ ನೀರು ಕದ್ದು ಮುಚ್ಚಿ ಬೃಹತ್ ಕೈಗಾರಿಕೆಗಳಿಗೆ ಹರಿದು ಹೋಗಬಾರದು. ಈ ನಿಟ್ಟಿನಲ್ಲಿ, ನೀರಿನ ಕುರಿತಂತೆ ಇರುವ ನೀತಿಯನ್ನು ಇನ್ನಷ್ಟು ಬಿಗಿ ಗೊಳಿಸುವುದು ಅತ್ಯಗತ್ಯವಾಗಿದೆ.





