ಬಳಕೆಯಾಗದೆ ಉಳಿದ ಬಜೆಟ್ ಹಣ 22,761 ಕೋಟಿ: ಯಾರು ಹೊಣೆ?
ಪ್ರತೀವರ್ಷ ಅದು ಯಾವುದೇ ಸರಕಾರವಿರಲಿ ಆ ಸರಕಾರ ಆ ವರ್ಷದ ಆಯವ್ಯಯವನ್ನು ಮಂಡಿಸಲೇಬೇಕು. ಆ ಬಜೆಟ್ ಇಡೀ ರಾಜ್ಯದ ಆದಾಯದ ವಿವರ ಹಾಗೂ ವೆಚ್ಚದ ವಿವರಗಳನ್ನು ಸಾರ್ವಜನಿಕರಿಗೆ ವಿಧಾನಸಭೆಯ ಸದಸ್ಯರ ಮುಖಾಂತರ ಬಜೆಟ್ ಅಧಿವೇಶನದಲ್ಲಿ ಸರಕಾರ ನೀಡುತ್ತದೆ. ಆ ವಿವರಗಳನ್ನೆಲ್ಲಾ ಶಾಸಕರು ನೋಡಬೇಕಾಗುತ್ತದೆ ಹಾಗೂ ಅಭಿಪ್ರಾಯ ವ್ಯಕ್ತಪಡಿಸಬೇಕಾಗುತ್ತದೆ. ಆಡಳಿತ ಪಕ್ಷದವರು ಆ ಬಜೆಟ್ ಹೇಗೆಯೇ ಇರಲಿ ಅದನ್ನು ಹಾಗೇ ಹೊಗಳಿ ಹರಸುತ್ತಾರೆ. ವಿರೋಧ ಪಕ್ಷದವರು ಆ ಬಜೆಟ್‌ನ್ನು ಅದು ಉತ್ತಮ ಇರಲಿ ಬಿಡಲಿ ಅದನ್ನು ಉಗ್ರವಾಗಿ ಟೀಕಿಸುತ್ತಾರೆ. ಹೊಗಳಿಕೆ ತೆಗಳಿಕೆ ಏನೇ ಇದ್ದರೂ ಅದರ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಲಿಕ್ಕೆ ಹಾಗೂ ಸೂಕ್ತ ಅಭಿಪ್ರಾಯ ವ್ಯಕ್ತಪಡಿಸಲಿಕ್ಕೆ ಯಾರೂ ಮುಂದಾಗುವುದಿಲ್ಲ. ಅಧಿವೇಶನದಲ್ಲಿ ಬಜೆಟ್ ಪುಸ್ತಕಗಳೊಂದಿಗೆ ಅನೇಕ ಉಪಯುಕ್ತ ಮಾಹಿತಿಯುಳ್ಳ ಅಂಕಿಸಂಖ್ಯೆಗಳನ್ನೊಳಗೊಂಡ ಪುಸ್ತಕಗಳನ್ನು ಆರ್ಥಿಕ ಹಾಗೂ ಭೌತಿಕ ಅಭಿವೃದ್ಧಿಯ ಮಾಹಿತಿಗಳನ್ನು ಕೊಡಲಾಗುತ್ತಿದ್ದು, ಆ ಮಾಹಿತಿ ತಿಳಿದುಕೊಂಡು ಅಭಿಪ್ರಾಯ ವ್ಯಕ್ತಪಡಿಸುವುದು ಹಾಗೂ ಸೂಕ್ತ ಸಲಹೆ ಸೂಚನೆ ಮಾರ್ಗದರ್ಶನಗಳನ್ನು ಸರಕಾರಕ್ಕೆ ಶಾಸಕರು ಮಾಡಿದರೆ ಸರಕಾರಕ್ಕೂ ಒಳ್ಳೆಯದು ಹಾಗೂ ಸಾರ್ವಜನಿಕರಿಗೂ ಒಳ್ಳೆಯದು.
ಪ್ರಸ್ತುತ ಅಧಿವೇಶನದಲ್ಲಿ 2014-15ರ ಸಿ.ಎ.ಜಿ. ವರದಿಯನ್ನು ಮಂಡಿಸಲಾಗಿದೆ. ಈ ವರದಿಗಳನ್ನು ನೋಡಿದರೆ ಎಲ್ಲ 29 ಇಲಾಖೆಗಳ ಆರ್ಥಿಕ ಹಾಗೂ ಭೌತಿಕ ಅಭಿವೃದ್ಧಿಯ ಚಿತ್ರ ದೊರಕುತ್ತದೆ. ಸರಕಾರ ಬಜೆಟ್ ಮಂಡಿಸುವಾಗ ಅದೆಷ್ಟು ಸಂತೋಷ ಭರಿತವಾಗಿರುತ್ತದೆಯೋ ಅಷ್ಟೇ ಸಂತೋಷ ಹಾಗೂ ಕರ್ತವ್ಯವನ್ನು ಪ್ರತಿವರ್ಷ ಬಜೆಟ್ ಅನುಷ್ಠಾನಗೊಳಿಸುವಾಗ ಇಡೀ ವರ್ಷದಲ್ಲಿ ಮಾಡುವುದಿಲ್ಲ. ಹೀಗಾಗಿ ಪ್ರತಿವರ್ಷ ಸಹಸ್ರಾರು ಕೋಟಿ ಮೊತ್ತವನ್ನು ಬಳಸದೆ ಉಳಿಸಿ ಭೌತಿಕ ಗುರಿಯನ್ನು ಸಾಧಿಸುವಲ್ಲಿ ತಪ್ಪುತ್ತದೆ. ಇದಕ್ಕೆಲ್ಲ ಕಾರಣರು ಸಂಬಂಧಿಸಿದ ಎಲ್ಲ ಮಟ್ಟದ ಅಧಿಕಾರಿಗಳೇ ಹೊಣೆಗಾರರೆಂದು ಹೇಳುವುದು ಅನಿವಾರ್ಯ.2014-15ರಲ್ಲಿ ಬಜೆಟ್ ಪ್ರಕಾರ ನಿಗದಿತ ಹಣ ಖರ್ಚು ಮಾಡದೆ ಇರುವ ಇಲಾಖೆಗಳೆಂದರೆ ಕೃಷಿ ತೋಟಗಾರಿಕೆ ಇಲಾಖೆ 1,600 ಕೋಟಿ.ರೂ ಆಹಾರ ಮತ್ತು ನಾಗರಿಕ ವಸ್ತು ಪೂರೈಕೆ ಇಲಾಖೆ 1,774 ಕೋಟಿ.ರೂ ಶಿಕ್ಷಣ ಇಲಾಖೆ 3,533 ಕೋಟಿ ರೂ., ನಗರಾಭಿವೃದ್ಧಿ ಇಲಾಖೆ 1,600 ಕೋಟಿ ರೂ., ಲೋಕೋಪಯೋಗಿ ಇಲಾಖೆ 1,600 ಕೋಟಿ ರೂ. ಜಲಸಂಪನ್ಮೂಲ ಇಲಾಖೆ 1,400 ಕೋಟಿ ರೂ., ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 1,774 ಕೋಟಿ ರೂ. ಹೀಗೆ ಈ ಮತ್ತು ವಿವಿಧ ಇಲಾಖೆಗಳಿಂದ ಒಟ್ಟು 22,760.20 ಕೋಟಿ ರೂ. ಮೊತ್ತ 2014-15ರಲ್ಲಿ ಬಳಸದೆ ಉಳಿಸಲಾಗಿದೆ. ಈ ಹಣ ಖರ್ಚು ಮಾಡದೆ ಉಳಿಸಿದ ಬೇಜವಾಬ್ದಾರಿ ಹಾಗೂ ಅಸಮರ್ಥ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲೇಬೇಕು. 2014-15ರಲ್ಲಿ ಬಜೆಟ್ ನಿಗದಿತ ಮೊತ್ತ 1,53,936.64 ಕೋಟಿ ರೂ. ಇದ್ದರೂ ಒಟ್ಟು 29 ಇಲಾಖೆಗಳಿಗೆ 1,31,365.26 ಕೋಟಿ ರೂ. ವೆಚ್ಚಮಾಡಿ 22,760.20 ಕೋಟಿ ರೂ. ಉಳಿಸಲಾಗಿದೆ. ಈ ಉಳಿಕೆ ಪ್ರತಿ ವರ್ಷ ಮುಂದುವರಿಯುತ್ತಲೇ ಬಂದಿದ್ದು, ಸಚಿವರಾಗಿರುವ ಮುಖ್ಯಮಂತ್ರಿಯವರು ಗಮನಿಸುವುದು ಸೂಕ್ತ. ಕಟ್ಟು ನಿಟ್ಟಾದ ಕ್ರಮವಿಡುವುದು ಅಗತ್ಯ. ರಾಜ್ಯದಲ್ಲಿ ಸುಮಾರು 2 ಲಕ್ಷಕ್ಕಿಂತ ಹೆಚ್ಚು ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಾನ ಖಾಲಿಯಿದ್ದು ಅವುಗಳನ್ನು ತುಂಬಲಿಕ್ಕೆ ಸರಕಾರಕ್ಕೆ ಆಗಿಲ್ಲ. ಇದು ಸರಿಯೇನು? ರಾಜ್ಯದ ಅಸಂಖ್ಯಾತ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳು, ಪದವಿಪೂರ್ವ ಹಾಗೂ ಪದವಿ ಕಾಲೇಜುಗಳು ಅನುದಾನರಹಿತವಾಗಿದ್ದು ಅವುಗಳನ್ನು ಅನುದಾನ ಸಹಿತವನ್ನಾಗಿ ಸರಕಾರ ಮಾಡಲೇಬೇಕು. ಅನೇಕ ಆಸ್ಪತ್ರೆಗಳಲ್ಲಿ ವೈದ್ಯರೇ ಇಲ್ಲದ್ದರಿಂದ ಅವುಗಳನ್ನು ತುಂಬಲೇಬೆಕು. ಕೃಷಿ ತೋಟಗಾರಿಕೆ ಇಲಾಖೆ ರೈತರಿಗೆ ವರದಾನವಾಗಿದ್ದು, ಈ ಇಲಾಖೆ ಬಗ್ಗೆ ಸರಕಾರಕ್ಕೆ ತಾತ್ಸಾರವೇಕೆ?
ಜಲಸಂಪನ್ಮೂಲ ಹಾಗೂ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅನುದಾನ ಮೊತ್ತ ಬಳಸದೆ ಉಳಿಸುವುದು ಪ್ರತಿವರ್ಷ ಮುಂದುವರಿಯುತ್ತಿರುವುದೇಕೆ? ಸರಕಾರದ ಖಜಾನೆಗೆ ರಾಜ್ಯದಲ್ಲಿ ಕುಡುಕುತನ ಹೆಚ್ಚುಮಾಡಿ ಹಣ ಸಂಪಾದಿಸುವುದೇಕೆ ಹಾಗೂ ಮಹಾತ್ಮಾ ಗಾಂಧೀಜಿಯವರ ತತ್ವಕ್ಕೆ ತಿಲಾಂಜಲಿ ಏಕೆ? ರೈತರು ಹೆಚ್ಚೆಚ್ಚು ಸಾಲ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ರಾಜ್ಯ ಸರಕಾರ ಸಿಕ್ಕಾಪಟ್ಟೆ ಸಾಲಮಾಡುತ್ತಿರುವುದೇಕೆ? ಪ್ರತಿವರ್ಷ ಸಿಕ್ಕಾಪಟ್ಟೆ ಸರಕಾರ ಬಡ್ಡಿ ತೆರುವುದೇಕೆ?ಪ್ರತಿವರ್ಷ ಹೆಚ್ಚೆಚ್ಚು ವಿವಿಧ ತೆರಿಗೆ, ಆದಾಯ ಹಾಗೂ ವಿವಿಧ ತೆರಿಗೆಯೇತರ ಆದಾಯ ಪಡೆಯುವುದೇಕೆ? 2016-17ರಲ್ಲಿ ರಾಜ್ಯ ಸರಕಾರ ಸುಮಾರು 13,000 ಕೋಟಿ ರೂ. ಬಡ್ಡಿಕೊಡುವುದು ಸರಿಯೇನು? ರಾಜ್ಯದಲ್ಲಿ ಗಾಂಧಿಯವರ ಕನಸಿನ ಕೂಸಾದ ಖಾದಿ ಗ್ರಾಮೋದ್ಯೋಗ ಸಂಘಗಳು ನಾಶವಾಗುತ್ತಿರುವುದನ್ನು ಸರಕಾರ ನೋಡಲಿಕ್ಕೆ ಸಾಧ್ಯವಿಲ್ಲವೇನು? ರಾಜ್ಯದ ಮೂರು ಸಾರಿಗೆ ಸಂಸ್ಥೆಗಳ ದಿವಾಳಿಯಾಗಿ 938 ಕೋಟಿ ರೂ. ಕೂಡಿಬಿದ್ದ ಹಾನಿಯಲ್ಲಿರುವುದು ಹಾಗೂ ಅನೇಕ ಸಂಘಸಂಸ್ಥೆ ನಿಗಮ ಕಂಪೆನಿಗಳು ಜನರಿಗೆ ಮಾರಕವಾಗಿರುವುದು ಸರಕಾರಕ್ಕೆ ತಿಳಿಯದೇನು? ಬಜೆಟ್ ಹಣ ಸದ್ವಿನಿಯೋಗ, ಸದ್ಬಳಕೆ, ಸದುಪಯೋಗವಾಗಲೇಬೇಕು. ಸಾರ್ವಜನಿಕ ಹಾಗೂ ಸರಕಾರದ ಆರ್ಥಿಕ ಪರಿಸ್ಥಿತಿ ಸುಧಾರಿಸಲೇಬೇಕು. ಹಾಗೂ ರಾಜ್ಯ ಸರ್ವಾಂಗೀಣ ಆರ್ಥಿಕ ಹಾಗೂ ಭೌತಿಕ ಅಭಿವೃದ್ಧಿಯಾಗಬೇಕು. ಒಟ್ಟಿನಲ್ಲಿ ಮೇಲೆ ರಾಜ್ಯ ಸರಕಾರದ ಬಜೆಟ್ ಸಾರ್ಥಕವಾಗಬೇಕು. ಸಂಜೀವಿನಿಯಾಗಲೇಬೇಕು. ಕಲ್ಪವೃಕ್ಷ, ಕಾಮಧೇನುವಾಗಬೇಕು. ಈ ದಿಶೆಯಲ್ಲಿ ಮುಖ್ಯಮಂತ್ರಿಯವರು ಗಮನಹರಿಸಿ ಪರಿಸ್ಥಿತಿ ಸುಧಾರಿಸಿದಲ್ಲಿ ಅವರಿಗೆ ಈ ರಾಜ್ಯದ ಜನತೆಗೆ ಚಿರಋಣಿ.
-ಬಿ.ಜಿ. ಬಣಕಾರ, ಮಾಜಿ ವಿಧಾನ ಸಭಾಧ್ಯಕ್ಷರು







