ನೇರ ಚುನಾಯಿತ ಸದನದ ಘನತೆಯನ್ನು ಸದಾ ರಕ್ಷಿಸಬೇಕು: ಅರುಣ್ ಜೇಟ್ಲಿ

ಹೊಸದಿಲ್ಲಿ, ಎ.7: ನಿರ್ಣಾಯಕ ಸರಕು ಹಾಗೂ ತೆರಿಗೆ (ಜಿಎಸ್‌ಟಿ) ಮಸೂದೆಯು ರಾಜ್ಯ ಸಭೆಯಲ್ಲಿ ಸಿಲುಕಿಕೊಂಡಿರುವಂತೆಯೇ, ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಆರ್ಥಿಕ ನಿರ್ಧಾರ ಕೈಗೊಳ್ಳುವುದನ್ನು ತಡೆಯಲು ಮೇಲ್ಮನೆಯನ್ನು ಎಷ್ಟರ ಮಟ್ಟಿಗೆ ಉಪಯೋಗಿಸಿಕೊಳ್ಳಬಹುದೆಂದು ಪ್ರಶ್ನಿಸಿದ್ದಾರೆ. ನೇರವಾಗಿ ಚುನಾಯಿತರಾಗಿರುವ ಸದನದ ‘ಗುರುತ್ವವನ್ನು’ ಸಹ ಕಾಪಾಡಬೇಕೆಂದು ಅವರು ಹೇಳಿದ್ದಾರೆ.
ಜಿಎಸ್‌ಟಿಯ ಕುರಿತು ತಾನು ಇನ್ನೊಮ್ಮೆ ಕಾಂಗ್ರೆಸ್‌ನೊಂದಿಗೆ ಮಾತನಾಡುವೆನೆಂದು ಜೇಟ್ಲಿ ಇಂದು ತಿಳಿಸಿದ್ದಾರೆ.
ಪರೋಕ್ಷವಾಗಿ ಆಯ್ಕೆಯಾದ ಮೇಲ್ಮನೆಯು ನೇರವಾಗಿ ಚುನಾಯಿತವಾದ ಲೋಕಸಭೆಯ ಬುದ್ಧಿ ಶಕ್ತಿಯನ್ನು ಪ್ರಶ್ನಿಸುವುದರೊಂದಿಗೆ, ಭಾರತೀಯ ಪ್ರಜಾ ಪ್ರಭುತ್ವವು ಗಂಭೀರ ಸವಾಲನ್ನು ಎದುರಿಸಿದೆಯೆಂದು ಅವರು ಕಳೆದ ವರ್ಷ ಮೇಯಲ್ಲಿ ಹೇಳಿದ್ದರು.
ಆರ್ಥಿಕ ನಿರ್ಧಾರ ಕೈಗೊಳ್ಳುವುದನ್ನು ತಡೆಯಲು ನಮ್ಮ ಮೇಲ್ಮನೆಯನ್ನು ಎಷ್ಟರವರೆಗೆ ಬಳಸಬಹುದು? ಆಸ್ಟ್ರೇಲಿಯದಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಬ್ರಿಟನ್‌ನಲ್ಲಿ ಸ್ವಲ್ಪ ಮುಂಚೆ ಈ ಕುರಿತು ಚರ್ಚಿಸಲಾಗಿದೆ. ಇಟಲಿಯಲ್ಲಿ ಇದೇ ಚರ್ಚೆ ನಡೆಯುತ್ತಿದೆ. ಏಕೆಂದರೆ, ಕಟ್ಟಕಡೆಗೆ ನೇರವಾಗಿ ಚುನಾಯಿತವಾಗಿರುವ ಸದನವೊಂದರ ಗೌರವವನ್ನು ಸದಾ ಕಾಪಾಡಬೇಕಾಗಿದೆ ಎಂದು ದಿಲ್ಲಿಯಲ್ಲಿ ನಡೆದ ವಿಚಾರಗೋಷ್ಠಿಯೊಂದರಲ್ಲಿ ಜೇಟ್ಲಿ ತಿಳಿಸಿದ್ದಾರೆ.
ದ್ವಿಸದನ ಶಾಸಕಾಂಗದ ಕುರಿತು ಅಭಿಪ್ರಾಯವು ವಿಶ್ವಾದ್ಯಂತ ತೀವ್ರವಾಗಿ ವಿಭಜನೆಯಾಗಿದೆ. ನೇರವಾಗಿ ಚುನಾಯಿತವಾಗಿರುವ ಸದನದ ಮೇಲೆ ಎರಡನೆಯ ಸದನವು ಸವಾರಿ ನಡೆಸುವ ಸಾಧ್ಯತೆಯಿರುವುದರಿಂದ ಅದು ಖಂಡಿತವಾಗಿಯೂ ಅಪ್ರಜಾಸತ್ತಾತ್ಮಕವೆಂದು ಕೆಲವರು ಹೇಳುತ್ತಿದ್ದಾರೆ. ಚುನಾಯಿತ ಸದಸ್ಯರು ರಾಜಕೀಯ ಅನಿವಾರ್ಯದಿಂದಾಗಿ ತರಾತುರಿಯಿಂದ ಮಂಡಿಸುವ ಮಸೂದೆಗಳ ವಿವರವಾದ ಪರಿಶೀಲನೆಯನ್ನು ಮೇಲ್ಮನೆಯು ಮಾಡುತ್ತದೆಂಬುದು ಇನ್ನು ಕೆಲವರ ವಾದವಾಗದೆ.
ಕೇಂದ್ರ ಹಾಗೂ ರಾಜ್ಯಗಳ ಹಲವು ತೆರಿಗೆಗಳನ್ನು ಏಕರೂಪದ ಜಿಎಸ್‌ಟಿ ದರದಿಂದ ಸ್ಥಳಾಂತರಿಸಲುದ್ದೇಶಿಸಿರುವ ಜಿಎಸ್‌ಟಿ ಮಸೂದೆಯ ಲೋಕಸಭೆಯಲ್ಲಿ ಕಳೆದ ವರ್ಷ ಮೇಯಲ್ಲಿ ಮಂಜೂರಾಗಿದೆ. ಆಳುವ ಎನ್‌ಡಿಎಗೆ ಬಹುಮತದ ಕೊರತೆಯಿರುವ ರಾಜ್ಯಸಭೆಯಲ್ಲಿ ಅದು ಮಂಜೂರಾಗಲು ಬಾಕಿಯಿದೆ. ಸಂವಿಧಾನ ತಿದ್ದುಪಡಿ ಮಸೂದೆಯನ್ನು ಜಿಎಸ್‌ಟಿ ದರಕ್ಕೆ ಮಿತಿ ನಿಗದಿಪಡಿಸುವಂತೆ ಆಗ್ರಹಿಸುತ್ತಿರುವ ಕಾಂಗ್ರೆಸ್, ವಿಧೇಯಕವನ್ನು ಈಗಿನ ರೂಪದಲ್ಲಿ ವಿರೋಧಿಸುತ್ತಿದೆ.
ಈಗ ಒಂದು ವಿಷಯ ಸಾಬೀತಾಗಿದೆ. ಜಿಎಸ್‌ಟಿಯನ್ನು ವಿರೋಧಿಸುತ್ತಿರುವ ಏಕೈಕ ಪಕ್ಷ ಕಾಂಗ್ರೆಸ್. ಕುತೂಹಲದ ವಿಷಯವೆಂದರೆ, ಮೊದಲ ಬಾರಿಗೆ ಕಾಯ್ದೆಯನ್ನು ಪ್ರಾಯೋಜಿಸಿದ್ದ ಪಕ್ಷವೇ ಸಂವಿಧಾನದ ಮಿತಿ ನಿಗದಿಪಡಿಸಬೇಕೆಂದು ತಡವಾಗಿ ಹೇಳುತ್ತಿದೆ. ಅದೀಗ ಸ್ವಲ್ಪ ಕಷ್ಟವೆಂದು ಕಾಣುತ್ತದೆಯೆಂದು ಜೇಟ್ಲಿ ಹೇಳಿದ್ದಾರೆ.
ಜಿಎಸ್‌ಟಿ ಸಮಿತಿ ನಿರ್ಧರಿಸುವ ನ್ಯಾಯೋಚಿತ ತೆರಿಗೆ ದರ ವಿಧಿಸುವುದು ತನ್ನ ಯೋಚನೆಯಾಗಿದೆ. ಎರಡು ರಾಜಕೀಯ ಪಕ್ಷಗಳ ನಡುವೆ ನ್ಯಾಯೋಚಿತ ದರದ ಕುರಿತು ಸಹಮತವಿರುವುದರಿಂದ ಇನ್ನಷ್ಟು ಸಹಮತದ ನಿರ್ಧಾರಕ್ಕೆ ಬರಬಹುದೆಂಬ ಆಶಾವಾದ ತನಗಿದೆಯೆಂದು ಅವರು ತಿಳಿಸಿದ್ದಾರೆ.
ಎ.25ರಂದು ಆರಂಭವಾಗುವ ಬಜೆಟ್ ಅಧಿವೇಶನ ದ್ವಿತೀಯಾರ್ಧದಲ್ಲಿ, ಜಿಎಸ್‌ಟಿ ಮಸೂದೆಗೆ ಮಂಜೂರಾತಿ ಪಡೆಯುವ ಆಶಯದೊಂದಿಗೆ, ತಾನು ಈ ವಿಷಯದ ಬಗ್ಗೆ ಕಾಂಗ್ರೆಸ್‌ನೊಂದಿಗೆ ಚರ್ಚಿಸಲಿದ್ದೇನೆಂದು ಜೇಟ್ಲಿ ಹೇಳಿದ್ದಾರೆ.





