ಫಿಫಾ ರ್ಯಾಂಕಿಂಗ್ಸ್: ಭಾರತಕ್ಕೆ ಹಿಂಭಡ್ತಿ
ಹೊಸದಿಲ್ಲಿ, ಎ.7: ವಿಶ್ವ ಫುಟ್ಬಾಲ್ ಆಡಳಿತ ಮಂಡಳಿ ಫಿಫಾ ಗುರುವಾರ ಬಿಡುಗಡೆ ಮಾಡಿರುವ ಜಾಗತಿಕ ಫುಟ್ಬಾಲ್ ರ್ಯಾಂಕಿಂಗ್ಸ್‌ನಲ್ಲಿ ಭಾರತ 2 ಸ್ಥಾನ ಕೆಳ ಜಾರಿ 162ನೆ ಸ್ಥಾನ ತಲುಪಿದೆ.
ಭಾರತ ಸದ್ಯ 142 ಅಂಕ ಹೊಂದಿದೆ. 2018ರ ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ 8 ಪಂದ್ಯಗಳನ್ನು ಆಡಿರುವ ಭಾರತ 7 ಪಂದ್ಯಗಳಲ್ಲಿ ಸೋಲುವುದರೊಂದಿಗೆ ಕಳಪೆ ಪ್ರದರ್ಶನ ನೀಡಿತ್ತು. ತುರ್ಕ್‌ಮೆನಿಸ್ತಾನದ ವಿರುದ್ಧ 1-2 ರಿಂದ ಸೋಲುವ ಮೂಲಕ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯವನ್ನು ಕೊನೆಗೊಳಿಸಿತ್ತು.
ಎರಡು ಸ್ಥಾನ ಭಡ್ತಿ ಪಡೆದಿರುವ ಇರಾನ್(142) ಏಷ್ಯಾದ ಅಗ್ರ ರ್ಯಾಂಕಿನ ದೇಶವಾಗಿದೆ. ಆಸ್ಟ್ರೇಲಿಯ(50) ಹಾಗೂ ದಕ್ಷಿಣ ಕೊರಿಯಾ(56) ನಂತರದ ಸ್ಥಾನದಲ್ಲಿವೆ.
ಬೆಲ್ಜಿಯಂ ತಂಡವನ್ನು ಹಿಂದಕ್ಕೆ ತಳ್ಳಿರುವ ಅರ್ಜೆಂಟೀನ ಫಿಫಾ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೆ ತಲುಪಿದೆ. ವಿಶ್ವ ಚಾಂಪಿಯನ್ ಜರ್ಮನಿ 5ನೆ ಸ್ಥಾನಕ್ಕೆ ಕುಸಿದಿದೆ. ಕೋಪಾ ಅಮೆರಿಕ ಟ್ರೋಫಿ ವಿಜೇತ ಚಿಲಿ ತಂಡ 3ನೆ ಸ್ಥಾನದಲ್ಲಿದೆ. ಕೊಲಂಬಿಯಾ 4ನೆ ಸ್ಥಾನಕ್ಕೆ ಏರಿದೆ. ಆದರೆ, ಸ್ಪೇನ್ 6ನೆ ಸ್ಥಾನಕ್ಕೆ ಕುಸಿದಿದೆ.





