ಥಾಣೆ: ಕೊಡ ನೀರಿಗಾಗಿ ರೈಲು ಪ್ರಯಾಣ!
ಮುಂಬೈ, ಎ.7: ಇಂಡಿಯನ್ ಪ್ರೀಮಿಯರ್ ಲೀಗ್‌ಗಾಗಿ ಕ್ರಿಕೆಟ್ ಪಿಚ್‌ಗಳನ್ನು ತಯಾರಿಸಲು ಲಕ್ಷಾಂತರ ಲೀಟರ್ ನೀರನ್ನು ಉಪಯೋಗಿಸುತ್ತಿರುವ ವಿರುದ್ಧ ಅರ್ಜಿಯೊಂದರ ವಿಚಾರಣೆಯನ್ನು ಬಾಂಬೆ ಹೈಕೋರ್ಟ್ ನಡೆಸುತ್ತಿದೆ. ಅಲ್ಲಿಂದ ಅಷ್ಟೇನೂ ದೂರವಲ್ಲದ ಥಾಣೆಯಲ್ಲಿ 30ರ ಹರೆಯದ ಪ್ರತಿಭಾ ಪಾಟೀಲ್ ಎಂಬವರು, ಕೇವಲ 2 ಕ್ಯಾನ್ ನೀರು ತರಲು ರೈಲಿನಲ್ಲಿ 10 ಕಿ.ಮೀ. ಪ್ರಯಾಣಿಸುತ್ತಾರೆ. ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ಹೋಗುವ ಸಂಭವವಿದೆ.
ರಾಜ್ಯದ ವಿಶಾಲ ಭಾಗಗಳಲ್ಲಿ ಬರಗಾಲ ತಾಂಡವವಾಡುತ್ತಿದ್ದು, ಮಹಾರಾಷ್ಟ್ರ ಕೈಗಾರಿಕಾಭಿವೃದ್ಧಿ ನಿಗಮವು ಮುಂಬೈಗೆ ನೆರೆಯ ಥಾಣೆಗೆ ಪ್ರತಿ ವಾರ 60 ತಾಸು ನೀರಿನ ಸಂಪರ್ಕ ಕಡಿತಗೊಳಿಸಲಾಗುವುದೆಂದು ಘೋಷಿಸಿದೆ.
ಇಲ್ಲೆಲ್ಲೂ ನೀರಿಲ್ಲ. ತಾವು ನೀರು ತರುವುದಕ್ಕಾಗಿ ರೈಲಲ್ಲಿ ಹೋಗುತ್ತೇವೆ. ಆ ವೇಳೆ, ಮಕ್ಕಳನ್ನು ಮನೆಯಲ್ಲೇ ಅವರ ಪಾಡಿಗೆ ಬಿಟ್ಟು ಹೋಗಬೇಕಾಗುತ್ತದೆ. ಇದರಿಂದಾಗಿ ಅವರಿಗೆ ಕೆಲವೊಮ್ಮೆ ಶಾಲೆ ತಪ್ಪುತ್ತದೆಂದು ಥಾಣೆಯ ದಿವಾ ನಿವಾಸಿ ಪಾಟೀಲ್ ಹೇಳಿದ್ದಾರೆ.
ವಾರಕ್ಕೆ 3-4 ದಿನವೂ ತಮಗೆ ನೀರು ಸಿಗುತ್ತಿಲ್ಲ. ಉಳಿದ ದಿನಗಳಲ್ಲೂ ನಂಬುವುದಕ್ಕಾಗುವುದಿಲ್ಲ. ಕೆಲವರು ನೀರಿನ ಟ್ಯಾಂಕರ್‌ಗಳನ್ನವಲಂಬಿಸಿದ್ದೇವೆ ಹಾಗೂನೀರನ್ನು ಸಂಗ್ರಹಿಸಿಡುತ್ತೇನೆಂದು ಇನ್ನೊಬ್ಬರು ತಿಳಿಸಿದ್ದಾರೆ.
ಥಾಣೆಯ ಸಾವಿರಾರು ಹತಾಶ ನಿವಾಸಿಗಳು ನೀರನ್ನು ಬಿಂದು ಬಿಂದು ಲೆಕ್ಕ ಮಾಡುತ್ತಾರೆ. ಚಿನ್ನ ತುಟ್ಟಿಯಾದರೆ ಅದನ್ನು ಕೊಳ್ಳದಿರಬಹುದು. ಆದರೆ, ನೀರಿನ ವಿಷಯದಲ್ಲಿ ಹಾಗಾಗುವುದಿಲ್ಲವೆಂದು ದಿವಾದ ಮತ್ತೊಬ್ಬ ನಿವಾಸಿ ಹೇಳಿದ್ದಾರೆ.
ಎಂಐಡಿಸಿ ವಾರಕ್ಕೆ 60 ದಿನ ನೀರು ಪೂರೈಕೆ ಕಡಿತಗೊಳಿಸುವುದರಿಂದ ಕಲ್ವಾ ಹಾಗೂ ದಿವಾಗಳಂತಹ ಪ್ರದೇಶಗಳು ಬಹುವಾಗಿ ಬಾಧಿತವಾಗಲಿವೆಯೆಂದು ಥಾಣೆಮಹಾನಗರ ಪಾಲಿಕೆಯ ಸಂದೀಪ ಮಾಲ್ವಿ ಅಭಿಪ್ರಾಯಿಸಿದ್ದಾರೆ. ನಗರ ಪಾಲಿಕೆ ಸಹ ಅನಿವಾರ್ಯವಾಗಿ ಶೇ.40ರಷ್ಟು ನೀರು ಪೂರೈಕೆಯನ್ನು ಕಡಿತಗೊಳಿಸಿದೆ. ಆ ಬಳಿಕ ಟ್ಯಾಂಕರ್‌ನವರು ನೀರಿನ ಬೆಲೆ ಹೆಚ್ಚಿಸಿದ್ದಾರೆ.
ವಿಚಿತ್ರವೆಂದರೆ, ಠಾಣೆ ಸರೋವರಗಳ ನಗರವೆಂದೇ ಪ್ರಸಿದ್ಧ. ಅಲ್ಲಿ 30 ಸರೋವರಗಳು ಹಾಗೂ 500 ಕೊಳವೆ ಬಾವಿಗಳಿವೆ. ಆದರೆ, ಅಗಾಧ ಜಲ ಬಿಕ್ಕಟ್ಟಿನೊಂದಿಗೆ ಹೋರಾಡಲು ನಗರ ಪಾಲಿಕೆ ವಿಫಲವಾಗಿದೆ.





