ರಾಷ್ಟ್ರಪತಿ ಆಡಳಿತವನ್ನು ರದ್ದುಗೊಳಿಸಬಲ್ಲೆ
ಕೇಂದ್ರಕ್ಕೆ ಉತ್ತರಾಖಂಡ ಹೈಕೋರ್ಟ್ ಎಚ್ಚರಿಕೆ
ನೈನಿತಾಲ್,ಎ.7: ಕೇಂದ್ರ ಸರಕಾರವನ್ನು ಗುರುವಾರ ತೀವ್ರ ತರಾಟೆಗೆತ್ತಿಕೊಂಡ ಉತ್ತರಾಖಂಡ್ ಉಚ್ಚ ನ್ಯಾಯಾಲಯವು,ರಾಜ್ಯದಲ್ಲಿಯ ರಾಷ್ಟ್ರಪತಿ ಆಡಳಿತವನ್ನು ತಾನು ರದ್ದುಗೊಳಿಸಬಲ್ಲೆ ಎಂದು ಹೇಳುವ ಮೂಲಕ ಬಿಸಿ ಮುಟ್ಟಿಸಿತು. ಎ.18(ಮುಂದಿನ ವಿಚಾರಣೆಯ ಸಂಭಾವ್ಯ ದಿನಾಂಕ) ರಂದು ಯಾವುದೇ ಕಪಟತನ ನಡೆಯಕೂಡದು,ಇಲ್ಲದಿದ್ದರೆ ಅರ್ಜಿದಾರನ ರಕ್ಷಣೆಗಾಗಿ ಸಂವಿಧಾನದ 356ನೆ ವಿಧಿಯ ಹಿಂದೆಗೆತದಂತಹ ಆದೇಶವನ್ನು ತಾನು ಹೊರಡಿಸಬಹುದು ಎಂದು ಅದು ಎಚ್ಚರಿಕೆ ನೀಡಿತು.
ಮಾಜಿ ಮುಖ್ಯಮಂತ್ರಿ ಹರೀಶ ರಾವತ್ ಅವರು ಸಲ್ಲಿಸಿರುವ ಎರಡು ಅರ್ಜಿಗಳಿಗೆ ಉತ್ತರಿಸಲು ಎ.12ರವರೆಗೆ ಕಾಲಾವಕಾಶವನ್ನೂ ಅದು ಕೇಂದ್ರಕ್ಕೆ ನೀಡಿತು. ಹಣಕಾಸು ಮಸೂದೆಯ ಮೇಲೆ ಮತ ವಿಭಜನೆ ಕುರಿತು ಕೇಂದ್ರದ ವಾದ ಅರ್ಥಹೀನವಾಗಿದೆ ಎಂದು ಕಾಂಗ್ರೆಸ್ ಬುಧವಾರ ವಾದಿಸಿತ್ತು. ಈ ಮೊದಲು ಮಾ.28ಕ್ಕೆ ವಿಶ್ವಾಸ ಮತವನ್ನು ನಿಗದಿಗೊಳಿಸಲಾಗಿತ್ತು. ಆದರೆ ರಾಜ್ಯದಲ್ಲಿ ಸಾಂವಿಧಾನಿಕ ವ್ಯವಸ್ಥೆ ಕುಸಿದು ಬಿದ್ದಿದೆ ಎಂಬ ನೆಪವೊಡ್ಡಿ ಮಾ.27ರಂದೇ ಕೇಂದ್ರವು ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರಿತ್ತು.
ರಾವತ್ ಇದನ್ನು ಉಚ್ಚ ನ್ಯಾಯಾಲಯದ ಏಕ ನ್ಯಾಯಾಧೀಶ ಪೀಠದೆದುರು ಪ್ರಶ್ನಿಸಿದ್ದರು. ಮಾ.31ರಂದು ಸದನದಲ್ಲಿ ಬಲಾಬಲ ಪರೀಕ್ಷೆಗೆ ಆದೇಶಿಸಿದ್ದ ನ್ಯಾಯಾಧೀಶರು ಅನರ್ಹಗೊಂಡಿರುವ ಕಾಂಗ್ರೆಸ್ಸಿನ ಒಂಬತ್ತು ಶಾಸಕರಿಗೂ ಮತದಾನದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿದ್ದರು.
ಧನ ವಿನಿಯೋಗ ಮಸೂದೆಯ ಮೇಲೆ ಕೇಂದ್ರ ಸರಕಾರವು ಸುಗ್ರೀವಾಜ್ಞೆಯನ್ನು ಹೊರಡಿಸಿದ್ದನ್ನು ಪ್ರಶ್ನಿಸಿ ರಾವತ್ ಸಲ್ಲಿಸಿರುವ ಅರ್ಜಿಗೆ ಉತ್ತರಿಸುವಂತೆ ಉಚ್ಚ ನ್ಯಾಯಾಲಯವು ಎ.1ರಂದು ಕೇಂದ್ರಕ್ಕೆ ನಿರ್ದೇಶ ನೀಡಿತ್ತು.
ರಾಷ್ಟ್ರಪತಿಗಳ ಆಡಳಿತವಿರುವ ರಾಜ್ಯದಲ್ಲಿ ವೆಚ್ಚಕ್ಕೆ ಅಧಿಕಾರ ನೀಡಿ ಕೇಂದ್ರವು ಹೊರಡಿಸಿದ್ದ ಸುಗ್ರೀವಾಜ್ಞೆಯನ್ನು ಪ್ರಶ್ನಿಸಿ ಕಾಂಗ್ರೆಸ್ ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದು, ವಿಧಾನಸಭೆಯು ಮಾ.18ರಂದು ಧನ ವಿನಿಯೋಗ ಮಸೂದೆಯನ್ನು ವಿದ್ಯುಕ್ತವಾಗಿ ಅಂಗೀಕರಿಸಿದೆ ಎಂದು ವಾದಿಸಿತ್ತು.





