‘ಹುಲಿ ಉಳಿಸಿ ಯೋಜನೆ’ಯಿಂದ ಬಚ್ಚನ್ ಉಚ್ಚಾಟನೆಗೆ ಕಾಂಗ್ರೆಸ್ ಆಗ್ರಹ

ಮುಂಬೈ, ಎ.8: ಪನಾಮಾ ಪೇಪರ್ಸ್ ಸೋರಿಕೆ ಪಟ್ಟಿಯಲ್ಲಿ ಬಾಲಿವುಡ್‌ನ ಹಿರಿಯ ನಟ ಅಮಿತಾಬ್ ಬಚ್ಚನ್ ಹೆಸರು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಅವರನ್ನು ರಾಜ್ಯದ ‘ಹುಲಿ ಉಳಿಸಿ ಯೋಜನೆ’ಯ ರಾಯಭಾರಿ ಸ್ಥಾನದಿಂದ ಉಚ್ಚಾಟಿಸಬೇಕು ಎಂದು ಮಹಾರಾಷ್ಟ್ರ ಕಾಂಗ್ರೆಸ್ ಆಗ್ರಹಿಸಿದೆ.
ಕಳಂಕಿತ ಬಚ್ಚನ್ ಪನಾಮಾ ಪೇಪರ್ಸ್ ಕೇಸ್‌ನಿಂದ ಕ್ಲೀನ್‌ಚಿಟ್ ಪಡೆಯುವ ತನಕ ಅವರನ್ನು ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನ ಅಭಿವೃದ್ದಿ ಸಲಹಾ ಸಮಿತಿಯ ಅಂತಾರಾಷ್ಟ್ರೀಯ ಫೈನಾನ್ಸ್ ಹಾಗೂ ಸರ್ವಿಸಸ್ ಸೆಂಟರ್‌ನಿಂದಲೂ ಹೊರಗಿಡಬೇಕು ಎಂದು ವಿಧಾನ ಸಭೆಯ ವಿಪಕ್ಷ ನಾಯಕ ರಾಧಾಕೃಷ್ಣ ವಿಖೆ ಪಾಟೀಲ್ ಬೇಡಿಕೆ ಇಟ್ಟಿದ್ದಾರೆ.
ಪನಾಮಾ ಪೇಪರ್ಸ್ ಕೇಸ್‌ನಲ್ಲಿ ಬಚ್ಚನ್ ಹೆಸರು ಕೇಳಿಬಂದಿರುವ ಕಾರಣ ಅವರು ರಾಜ್ಯದಲ್ಲಿ ಎರಡು ಪ್ರಮುಖ ಹುದ್ದೆಯಲ್ಲಿ ಮುಂದುವರಿಯುವುದು ಸರಿಯಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಮುಗಿಸುವ ತನಕ ಅವರನ್ನು ಎರಡೂ ಹುದ್ದೆಯಿಂದ ಕೆಳಗಿಳಿಸಬೇಕು ಎದು ವಿಖೆಪಾಟೀಲ್ ಆಗ್ರಹಿಸಿದರು.
Next Story





