ಸೌದಿ 'ಗ್ರೀನ್ ಕಾರ್ಡ್' ಶಾಶ್ವತ ನಿವಾಸಿ ಯೋಜನೆಗೆ ವಲಸಿಗರಿಂದ ಭಾರೀ ಸ್ವಾಗತ

ಜಿದ್ದಾ, ಎ.8: ಅಮೆರಿಕಾ ದೇಶ ಕೊಡ ಮಾಡುವ 'ಗ್ರೀನ್ ಕಾರ್ಡ್' ವ್ಯವಸ್ಥೆ ಮಾದರಿಯಲ್ಲಿಯೇ ಸೌದಿ ಅರೇಬಿಯದಲ್ಲೂ ವಲಸಿಗರಿಗೆ ಒಂದು ವ್ಯವಸ್ಥೆ ಜಾರಿಗೊಳಿಸುವ ಬಗ್ಗೆ ಸೌದಿಯ ಉಪ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಹಾಗೂ ಉಪ ಪ್ರಧಾನಿ ಮತ್ತು ರಕ್ಷಣಾ ಸಚಿವರ ಹೇಳಿಕೆಗೆ ಅಲ್ಲಿನ ವಲಸಿಗರಿಂದ ಭಾರೀ ಸ್ವಾಗತ ವ್ಯಕ್ತವಾಗಿದ್ದು ಇಂತಹ ಒಂದು ಯೋಜನೆ ಜಾರಿಯಾದರೆ ಸೌದಿಯಲ್ಲಿರುವ ಸುಮಾರು10 ಮಿಲಿಯಕ್ಕೂ ಅಧಿಕ ವಲಸಿಗರಿಗೆ ಶಾಶ್ವತ ನಿವಾಸಿ ಸ್ಥಾನಮಾನ ದೊರೆತಂತಾಗುವುದು ಎಂದು ಸೌದಿ ಗಜೆಟ್ ವರದಿ ಮಾಡಿದೆ.
ಈ ಹೊಸ ಯೋಜನೆಯಿಂದ ಉದ್ಯೋಗದಾತರು ತಮ್ಮ ಸಂಸ್ಥೆಗಳಲ್ಲಿ ನಿಗದಿತ ಪ್ರಮಾಣದ ವಿದೇಶಿ ನೌಕರರಿಗಿಂತ ಹೆಚ್ಚಿನ ನೌಕರರನ್ನು ಒಂದು ನಿರ್ದಿಷ್ಟ ಶುಲ್ಕ ಪಾವತಿಸಿದ ನಂತರ ನೇಮಿಸಬಹುದಾದ ಕ್ರಮದಿಂದ ದೇಶ ವರ್ಷಕ್ಕೆ 10 ಬಿಲಿಯನ್ ಡಾಲರ್ ವಾರ್ಷಿಕ ಆದಾಯಪಡೆಯುವುದು ಎಂದು ಈ ಹಿಂದೆ ಬ್ಲೂಂಬರ್ಗ್‌ಗೆ ನೀಡಿದ ವಿಶೇಷ ಸಂದರ್ಶನವೊಂದರಲ್ಲಿ ಉಪ ರಾಜಕುಮಾರ ಹೇಳಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಸೌದಿ ಅರೇಬಿಯಾದ ಫೆಡರೇಶನ್ ಆಫ್ ಲೇಬರ್ ಕಮಿಟೀಸ್ ಅಧ್ಯಕ್ಷ ನಿದಲ್ ರಿದ್ವಾನ್ ಈ ಪ್ರಸ್ತಾವಿತ ವ್ಯವಸ್ಥೆಯನ್ನು ಜಾರಿಗೊಳಿಸಲುಸರಕಾರ ಸ್ವಾಯತ್ತ ಪ್ರಾಧಿಕಾರವೊಂದನ್ನು ಶೀಘ್ರ ರಚಿಸುವುದೆಂಬ ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ತೈಲ ಕ್ಷೇತ್ರದ ಹೊರತಾಗಿ ಅನ್ಯ ಕ್ಷೇತ್ರಗಳಿಂದ ಆದಾಯ ಗಳಿಸುವ ನಿಟ್ಟಿನಲ್ಲಿ ಸೌದಿ ಆಡಳಿತ ತೆಗೆದುಕೊಳ್ಳುವ ಕ್ರಮದ ಭಾಗ ಇದಾಗಿದೆ. ಪ್ರಸ್ತಾವಿತ ಗ್ರೀನ್ ಕಾರ್ಡ್ ಯೋಜನೆಯಿಂದ ಮೇಲೆ ತಿಳಿಸಿದ 10 ಬಿಲಿಯನ್ ಡಾಲರ್ ಆದಾಯದ ಹೊರತಾಗಿ ಅಧಿಕ ವಿದೇಶಿ ನೌಕರರನ್ನು ನೇಮಿಸುವ ಸಂಸ್ಥೆಗಳಿಗೆ ವಿಧಿಸಲಾಗುವ ಶುಲ್ಕದಿಂದ ಹೆಚ್ಚುವರಿ 10 ಬಿಲಿಯನ್ ಡಾಲರ್ ಆದಾಯ ಗಳಿಸಬಹುದಾಗಿದೆಯೆಂದು ಅಂದಾಜಿಸಲಾಗಿದೆ.







