ಈಗಲೇ ಜಾಗೃತರಾಗಿ , ಇವುಗಳ ಮೂಲಕ ಡಯಾಬಿಟೀಸ್ ದೂರ ಇಡಿ

ಈ ಬಾರಿಯ ವಿಶ್ವ ಆರೋಗ್ಯ ದಿನದ ಘೋಷವಾಕ್ಯ, ಮಧುಮೇಹ ಹಿಮ್ಮೆಟ್ಟಿಸಿ ಎನ್ನುವುದು. ಡಯಾಬಿಟಿಸ್ ಹಿಮ್ಮೆಟ್ಟಿಸುವುದು ಹೇಗೆ ಎನ್ನುವುದೇ ಪ್ರಶ್ನೆ. ತೃಣಧಾನ್ಯ, ಬೀನ್ಸ್ ಹಾಗೂ ಮೀನನ್ನು ನಿಯತವಾಗಿ ಬಳಸಿ; ಮಧುಮೇಹದಿಂದ ದೂರ ಇರಿ ಎನ್ನುವುದು ತಜ್ಞರ ಅಭಿಮತ. ಮಧುಮೇಹ ನಿಯಂತ್ರಣದಲ್ಲಿಡಲು ಏನು ಮಾಡಬೇಕು ಎನ್ನುವುದನ್ನು ತೂಕ ಇಳಿಸುವ ಕಂಪನಿಯ ಆಹಾರ ಕ್ರಮ ತಜ್ಞೆ ನೇಹಾ ಸೇವಾನಿ ಸಲಹೆ ರೂಪದಲ್ಲಿ ಹಂಚಿಕೊಂಡಿದ್ದಾರೆ.
ತೃಣಧಾನ್ಯಗಳು ಪ್ರೊಟೀನ್‌ನ ಆಕರಗಳು. ಇದರ ಜತೆಗೆ ನಿರೋಧಕ ಅಂಶಗಳು, ಪೋಷಕಾಂಶ, ಕಬ್ಬಿಣ, ಕ್ಯಾಲ್ಸಿಯಂ, ರಂಜಕ, ಪೊಟ್ಯಾಶಿಯಂನಂಥ ಉಪಯುಕ್ತ ಖನಿಜಗಳು ಹೇರಳವಾಗಿರುತ್ತವೆ. ಇವು ಆಂಟಿ ಓಕ್ಸಿಡೆಂಟ್ಸ್ ಪ್ರಮಾಣವನ್ನೂ ಅಧಿಕವಾಗಿ ಹೊಂದಿರುತ್ತವೆ.
ಮೀನುಗಳಲ್ಲಿ ಒಮೆಗಾ 3-ಫ್ಯಾಟಿ ಆಮ್ಲ ಅಧಿಕವಾಗಿದ್ದು, ಇದು ಕೊಲೆಸ್ಟ್ರಾಲ್ ಹಾಗೂ ಟ್ರೈಗ್ಲಿಸರೈಡ್ಸ್‌ಗಳನ್ನು ನಿಯಂತ್ರಿಸುತ್ತದೆ. ಇದು ರೋಗನಿರೋಧಕವಾಗಿಯೂ ಕೆಲಸ ಮಾಡುತ್ತದೆ.
ಬೀನ್ಸ್‌ನಲ್ಲಿ ಕೂಡಾ ನಾರಿನ ಅಂಶ ಹಾಗೂ ಪ್ರೊಟೀನ್ ಅಧಿಕವಾಗಿರುತ್ತದೆ. ಅಂತೆಯೇ ವಿಟಮಿನ್ ಎ, ಬಿ ಕಾಂಪ್ಲೆಕ್ಸ್, ವಿಟಮಿನ್ ಇ, ಕಬ್ಬಿಣ, ತಾಮ್ರ, ಝಿಂಕ್, ಸೆಲೆನಿಯಂನಂಥ ಖನಿಜಾಂಶಗಳು ಹಾಗೂ ಸೂಕ್ಷ್ಮ ಪೋಷಕಾಂಶ ಹೊಂದಿರುವ ಸ್ಪಿರುಲಿನಾ, ರಕ್ತದ ಸಕ್ಕರೆ ಅಂಶ ನಿಯಂತ್ರಿಸುವ ದಾಲ್ಚೀನಿ ಕೂಡಾ ಉಪಯುಕ್ತ. ಕುದುರೆ ಮೇವಿನ ಸೊಪ್ಪು (ಅಲ್ಫಾಲ್ಫಾ) ಹಾಗೂ ಅಧಿಕ ನಾರು ಹೊಂದಿರುವ ಗೆಣಸು ಕೂಡಾ ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ.








