ಹಸಿವು, ಬಾಯಾರಿಕೆಯಿಂದ ಸಾಯುತ್ತಿವೆ ಬೀಫ್ ಬ್ಯಾನ್ ನಿಂದಾಗಿ 'ಉಳಿದ ' ಗೋವುಗಳು
ಬರಪೀಡಿತ ಮರಾಠವಾಡ

ಒಸ್ಮಾನಾಬಾದ್ : ಕಳೆದ ಆರು ತಿಂಗಳ ಅವಧಿಯಲ್ಲಿ ಮಹಾರಾಷ್ಟ್ರಾದ ತೀವ್ರ ಬರಪೀಡಿತ ಮರಾಠವಾಡ ಪ್ರಾಂತ್ಯದ ರೈತ ಲಕ್ಷ್ಮಣ ರಿತಾಪುರೆ ತನ್ನ ಹತ್ತುಜಾನುವಾರುಗಳನ್ನು ಕಳೆದುಕೊಂಡಿದ್ದಾನೆ. ಅವುಗಳಲ್ಲಿ ನಾಲ್ಕು ದನಗಳು, ನಾಲ್ಕು ಎಮ್ಮೆಗಳು ಹಾಗೂ ಎರಡು ಕರುಗಳು ಸೇರಿವೆ. ಕಳೆದೆರಡು ವರ್ಷಗಳಿಂದ ಬರದಿಂದ ಕಂಗಾಲಾಗಿರುವ ಈ ಪ್ರದೇಶದ ರೈತರಿಗೆ ತಮ್ಮ ಜಾನುವಾರುಗಳಿಗೆ ನೀರು ಹಾಗೂ ಆಹಾರ ನೀಡಲು ಏನೂ ಉಳಿದಿಲ್ಲ.
ಅದಾಗಲೇ ಈ ಪ್ರಾಂತ್ಯದ ಎಲ್ಲಾ ಗ್ರಾಮಗಳೂ ತೀವ್ರ ಬರಗಾಲದಿಂದ ಕಂಗಾಲಾಗಿರುವಾಗ ಮಹಾರಾಷ್ಟ್ರ ಸರಕಾರದ ಗೋಹತ್ಯೆ ನಿಷೇಧ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈಗ ಕಸಾಯಿಖಾನೆಗಳಿಂದ ಗೋವುಗಳಿಗೆ ಬೇಡಿಕೆ ಕಡಿಮೆಯಾಗಿದ್ದು ಮಾರುಕಟ್ಟೆಗಳಲ್ಲಿಯೂ ಗೋವುಗಳಿಗೆ ಉತ್ತಮ ಬೆಲೆ ದೊರೆಯುತ್ತಿಲ್ಲ. ತನ್ನ ಗೋವುಗಳನ್ನು ಕಳೆದ ವರ್ಷ ಹಾಗೂ ಈ ವರ್ಷ ಎರಡು ಬಾರಿ ಮಾರಾಟ ಮಾಡಲು ಯತ್ನಿಸಿ ವಿಫಲನಾಗಿದ್ದ ಲಕ್ಷ್ಮಣತನ್ನ ಹತ್ತು ಜಾನುವಾರುಗಳನನು ಕಳೆದುಕೊಂಡು ದುಃಖಿತನಾಗಿದ್ದಾನೆ. ಅವುಗಳನ್ನು ಕಳೆದುಕೊಂಡ ನಂತರವೂ ಆತನಿಗೆ ಸಾಕಲು 26 ಜಾನುವಾರುಗಳಿವೆ. ಅವುಗಳ ಆಹಾರಕ್ಕೆ ವಾರಕ್ಕೆ ರೂ 2000ರಷ್ಟು ವ್ಯಯಿಸುವ ಲಕ್ಷ್ಮಣ್ ಹಾಲು ಮಾರಿ ಸರಿಸುಮಾರು ಅಷ್ಟೇ ಹಣ ಗಳಿಸುತ್ತಾನೆ. ಸರಕಾರ ಮರಾಠವಾಡ ಪ್ರಾಂತ್ಯದಲ್ಲಿ 333 ಗೋಶಾಲೆಗಳನ್ನು ನಡೆಸಲು ಸಹಾಯ ಮಾಡುತ್ತಿದ್ದು ಇವುಗಳನ್ನು ಖಾಸಗಿ ಸಂಸ್ಥೆಗಳು ಹಾಗೂ ಎನ್‌ಜಿಒಗಳು ನಿರ್ವಹಿಸುತ್ತವೆ ಹಾಗೂ ಗೋವುಗಳಿಗೆ ಉಚಿತ ಆಹಾರ ಹಾಗೂ ನೀರನ್ನು ಇಲ್ಲಿ ಒದಗಿಸಲಾಗುತ್ತದೆ.
ತೀವ್ರ ಬರಗಾಲಕ್ಕೆ ತುತ್ತಾಗಿರುವ ಬೀಡ್, ಲಾತೂರ್ ಹಾಗೂ ಒಸ್ಮಾನಾಬಾದಿನಲ್ಲಿ3.2 ಲಕ್ಷ ಜಾನುವಾರುಗಳು ಗೋಶಾಲೆಗಳಲ್ಲಿವೆ. ಹೆಚ್ಚಿನ ಗೋ ಪರಿಹಾರ ಶಿಬಿರಗಳನ್ನು ಸ್ಥಳೀಯ ರಾಜಕಾರಣಿಗಳು ನಡೆಸುತ್ತಿದ್ದು ಈಆಶ್ರಯ ತಾಣಗಳಿಂದ ಸಹಾಯ ಪಡೆದ ಜನರು ತಮ್ಮನ್ನು ಚುನಾವಣೆ ಸಮಯ ಮರೆಯಲಿಕ್ಕಿಲ್ಲವೆಂಬ ಭಾವನೆ ಹೊಂದಿದ್ದಾರೆ. ಕೆಲವು ಗೋ ಶಿಬಿರಗಳಲ್ಲಿ ಅವುಗಳ ಮಾಲಿಕರಿಗೂ ಉಚಿತ ಆಹಾರ ಒದಗಿಸಲಾಗುತ್ತಿದ್ದು ಇಂತಹ ಶಿಬಿರಗಳಿಗೆ ಕೆಲವು ರೈತರ ಇಡೀ ಕುಟುಂಬಗಳೇ ಸ್ಥಳಾಂತರಗೊಂಡಿವೆ.







