ಅತ್ಯಾಶ್ಚರ್ಯಕರ ದರೋಡೆ: ವೃದ್ಧ ದಂಪತಿಗಳನ್ನುಮನೆಯಲ್ಲೇ ಬಂಧನದಲ್ಲಿಟ್ಟು ದರೋಡೆ ಮಾಡಿದ ದುಷ್ಕರ್ಮಿಗಳು

ಬರೇಲಿ, ಎಪ್ರಿಲ್.8: ಉತ್ತರಪ್ರದೇಶದ ದುರ್ಗಾನಗರ ಕಾಲನಿಯ ಡಿ.8 ಪಾರ್ಟ್ 2ರಲ್ಲಿ ಅತ್ಯಾಶ್ಚರ್ಯಕರ ದರೋಡೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ರೈಲ್ವೆಯಲ್ಲಿ ಮೆಕಾನಿಕ್ ಆಗಿ ನಿವೃತ್ತರಾಗಿದ್ದ 64ವರ್ಷದ ದೇವಿಶಂಕರ್ ಮತ್ತು ಅವರ ಪತ್ನಿ 61ವರ್ಷದ ವಿಮಲೇಶ್ ಪಾಠಕ್‌ರನ್ನು ಸಿನೆಮೀಯ ರೀತಿಯಲ್ಲಿ ಮೂರು ದಿವಸಗಳ ಕಾಲ ಮನೆಯೊಳಗೆ ಬಂಧಿಸಿಟ್ಟು ದರೋಡೆಕೋರರು ಲೂಟಿಗಿಳಿದಿದ್ದರು!
ವರದಿಗಳು ತಿಳಿಸಿರುವ ಪ್ರಕಾರ ಟ್ಯಾಂಕ್‌ನಿಂದ ನೀರು ಸೋರಿಕೆಯಾಗುತ್ತಿದೆ ಎಂದು ನೆಪಹೇಳಿಕೊಂಡು ಬಂದ ದುಷ್ಕರ್ಮಿಗಳು ದೇವಿ ಶಂಕರ್ ಹೊರಗೆ ಬಂದೊಡನೆ ಕೋವಿ ತೋರಿಸಿ ಮನೆಯೊಳಕ್ಕೆ ನುಗ್ಗಿದ್ದರು. ಆಮೇಲೆ ಮೂರು ದಿವಸಗಳ ಕಾಲ ಹಿರಿಯ ದಂಪತಿಗಳನ್ನು ಬಂಧಿಸಿಟ್ಟು ಬೆದರಿಕೆಹಾಕಿ ದರೋಡೆ ಪ್ರಕ್ರಿಯೆ ಆರಂಭಿಸಿದ್ದರು. ಒಂದು ಲಕ್ಷದ ಚೆಕ್‌ಗೆ ಸಹಿಹಾಕಿಸಿದರು.ಮನೆಯಲ್ಲಿದ್ದ ಬಂಗಾರದ ಒಡವೆಗಳನ್ನು ಕಿತ್ತುಕೊಂಡರು ಮತ್ತುಮನೆಯನ್ನು ಅವರ ಹೆಸರಲ್ಲಿ ಮಾಡಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಗ ನೆರೆಹೊರೆಯವರಿಗೆ ಶಂಕೆ ಬಂದು ಮೂವರು ದರೋಡೆಕೋರರನ್ನು ಅವರು ಸೆರೆಹಿಡಿದ್ದಾರೆ ಎಂದು ವರದಿಗಳುತಿಳಿಸಿವೆ.
ಒಬ್ಬ ಈ ಸಂದರ್ಭದಲ್ಲಿ ಮನೆಯಿಂದ ಹೊರಗೆ ಇದ್ದುದರಿಂದ ಅವನು ಸಿಕಿಬಿದ್ದಿಲ್ಲ. ಬರೇಲಿಯಲ್ಲಿ ಇದೇ ಮೊದಲಬಾರಿ ಇಂತಹ ಘಟನೆ ನಡೆದಿದೆಯೆನ್ನಲಾಗಿದ್ದು 2012 ಮಾರ್ಚ್‌ನಲ್ಲಿ ದೇವಿಶಂಕರ್ ರೈಲ್ವೆಯಿಂದ ನಿವೃತ್ತರಾಗಿದ್ದರು. ಎಪ್ರಿಲ್ ನಾಲ್ಕರಂದು ರಾತ್ರೆ ಸುಮಾರು ಮೂರು ಗಂಟೆಯ ವೇಳೆಗೆ ದೇವಿಶಂಕರ್‌ರ ಮೊಬೈಲ್‌ಗೆ ಮೂರು ಮಿಸ್ಡ್‌ಕಾಲ್‌ಗಳು ಬಂದಿದ್ದವು. ಆದರೆ ಅದನ್ನು ಅವರು ನಿರ್ಲಕ್ಷಿಸಿದ್ದರು. ನಾಲ್ಕನೆ ಬಾರಿ ಬಂದಾಗ ಫೋನ್ ತೆಗೆದಿದ್ದರು ನಿಮ್ಮ ನೆರೆಯವನು ಮಾತಾಡುತ್ತಿದ್ದೇನೆ ನಿಮ್ಮ ನೀರಿನ ಮೋಟಾರ್‌ನಿಂದಾಗಿ ರಸ್ತೆಗೆ ನೀರು ಬೀಳುತ್ತಿದೆ ಎಂದು ತಿಳಿಸಿದ್ದ. ದೇವಿಶಂಕರ್ ಬಾಗಿಲು ತೆರೆದು ಮೋಟಾರು ಬಂದ್ ಮಾಡಿ ಮನೆಯೊಳಗೆ ಬರಲು ಮೆಟ್ಟಿಲಿನಕಡೆಗೆ ಬಂದಾಗ ನಾಲ್ವರು ಯುವಕರು ಅವರ ಹಣೆಗೆ ಕೋವಿಯಿಟ್ಟು ರವಿಶಂಕರ್‌ರನ್ನು ಒಳಕ್ಕೆ ಕರೆದುಕೊಂಡು ಬಂದಿದ್ದರು. ಆನಂತರ ಕುರ್ಚಿಯಲ್ಲಿ ಕಟ್ಟಿಹಾಕಿದ್ದರು. ಕಪಾಟು ಪೆಟ್ಟಿಗೆಯ ಕೀಲಿಕೈ ಪಡೆದು ಬಂಗಾರ ಹನ್ನೆರಡು ಸಾವಿರ ರೂಪಾಯಿ ನಗದು ಎಲ್ಲವನ್ನು ಕಿತ್ತುಕೊಂಡಿದ್ದರು. ಚೆಕ್‌ಬುಕ್ ತೆಗೆದು ಖಾಲಿ ಚೆಕ್‌ಗೆ ದಂಪತಿಗಳಿಂದ ಹಸ್ತಾಕ್ಷರ ಮಾಡಿಸಿದ್ದರು. ಆನಂತರ ಅವರಲ್ಲಿಬ್ಬರು ಚೆಕ್ ತೆಗೆದುಕೊಂಡು ಬ್ಯಾಂಕ್‌ಗೆ ಹೋದರು. ನಂತರ ಮನೆಯ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಯಿಸಲಿಕ್ಕೆ ಪ್ರಯತ್ನಪಡುತ್ತಿದ್ದಾಗ ನೆರೆಯವರಿಗೆ ಅನುಮಾನ ಬಂದು ದರೋಡೆಕೋರರಲ್ಲಿ ಮೂವರನ್ನು ಹಿಡಿಯುವಲ್ಲಿ ಅವರು ಯಶಸ್ವಿಯಾದರೆಂದು ವರದಿ ತಿಳಿಸಿದೆ.







