ಬಾಲ ವಧು, ವರರು ಜವಾಬ್ದಾರಿ ನಿಭಾಯಿಸಲು ಶಕ್ತರು: ಬಾಲ ವರನ ತಂದೆ
ಜಿದ್ದಾ, ಎ. 8: ಸೌದಿ ಅರೇಬಿಯದ ತಬೂಕ್ ನಗರದಲ್ಲಿ ಇತ್ತೀಚೆಗೆ 16 ವರ್ಷದ ಬಾಲಕ ಮತ್ತು ಆತನ 15 ವರ್ಷದ ಸಂಬಂಧಿ ಮದುವೆಯಾಗಿದ್ದು ದೊಡ್ಡ ಸುದ್ದಿಯಾಯಿತು. ಕೆಲವರು ಅದನ್ನು ದಿಟ್ಟ ನಡೆ ಎಂದು ಬಣ್ಣಿಸಿದರೆ, ಇನ್ನು ಕೆಲವರು, ನಿಮಗೆ ಮದುವೆಯಾಗುವ ಪ್ರಾಯ ಇನ್ನೂ ಆಗಿಲ್ಲ ಎಂದು ಹೇಳಿದರು.
ಆದರೆ, ತನ್ನ ಮಗ ಮದುವೆಯಾಗಲು ಬಯಸಿದ್ದನು ಎಂದು ವರನ ತಂದೆ ಅಲಿ ಅಲ್-ಖೈಸಿ ಹೇಳಿದ್ದಾರೆ. ‘‘ಈ ಜವಾಬ್ದಾರಿಯನ್ನು ಆತ ನಿಭಾಯಿಸುತ್ತಾನೆ ಎಂಬ ಬಗ್ಗೆ ನನಗೆ ವಿಶ್ವಾಸವಿದೆ. ನಾನು ಅವನನ್ನು ತುಂಬಾ ನಂಬುತ್ತೇನೆ. ನಾನಿಲ್ಲದಿರುವಾಗ ಮನೆಯ ವ್ಯವಹಾರಗಳನ್ನೆಲ್ಲ ಅವನೇ ನೋಡಿಕೊಳ್ಳುತ್ತಾನೆ’’ ಎಂದು ಅವರು ಹೇಳುತ್ತಾರೆ.
ಅದೂ ಅಲ್ಲದೆ, ತಾನು 17 ವರ್ಷದವನಿರುವಾಗಲೇ ಮದುವೆಯಾಗಿದ್ದೆ ಎಂದು ಸ್ಥಳೀಯ ಪತ್ರಿಕೆಯೊಂದರ ಜೊತೆ ಮಾತನಾಡಿದ ಅವರು ತಿಳಿಸಿದರು. ಮದುವೆಯಾಗಿದ್ದರಿಂದ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಲಾಗಲಿ, ಕೆಲಸ ಹುಡುಕುವುದಕ್ಕಾಗಲಿ ತನಗೆ ಸಮಸ್ಯೆಯಾಗಲಿಲ್ಲ ಎಂದರು.
‘‘ಇದು ಇಸ್ಲಾಮಿಕ್ ಕಾನೂನಿಗೆ ವಿರುದ್ಧವಲ್ಲ. ಅವನ ಸಂಬಂಧಿ ಹಾಗೂ ವಧು ಕೂಡ ತನ್ನ ಜವಾಬ್ದಾರಿಯನ್ನು ನಿರ್ವಹಿಸಲು ಸಮರ್ಥಳಾಗಿದ್ದಾಳೆ’’ ಎಂದು ವರನ ತಂದೆ ಹೇಳಿದರು.
ಹದಿಹರಯದ ದಂಪತಿ ಅಲ್-ಖೈಸಿಯ ದೊಡ್ಡ ಮನೆಯ ಪ್ರತ್ಯೇಕ ವಿಭಾಗದಲ್ಲಿ ವಾಸಿಸುತ್ತಿದ್ದಾರೆ.
ತಾನು ಇಸ್ಲಾಮಿಕ್ ಕಾನೂನನ್ನು ಉಲ್ಲಂಘಿಸಿಲ್ಲ ಎಂದು ಬಾಲ ವರ ಹೇಳುತ್ತಾರೆ. ತನ್ನ ಮದುವೆಗೆ ಹೆತ್ತವರ ಒಪ್ಪಿಗೆಯಿದೆ ಎಂದರು.
ಆರಂಭದಲ್ಲಿ, ತನ್ನ ಶಾಲಾ ಗೆಳೆಯರಿಗೆ ಮದುವೆ ಆಮಂತ್ರಣ ಪತ್ರಗಳನ್ನು ಕಳುಹಿಸಿದಾಗ, ಈ ವಿಷಯದ ಬಗ್ಗೆ ಭಾರೀ ಚರ್ಚೆಯಾಗಿತ್ತು.





