ಒಂದೇ ಒಂದು ನೋ-ಬಾಲ್ ಎಸೆದಿರುವುದಕ್ಕೆ ವಿಲನ್‌ನಂತೆ ಬಿಂಬಿಸಬೇಡಿ: ಅಶ್ವಿನ್ ಆಗ್ರಹ

ಮುಂಬೈ, ಎ.8: ವೆಸ್ಟ್‌ಇಂಡೀಸ್ ವಿರುದ್ಧದ ಟ್ವೆಂಟಿ-20 ವಿಶ್ವಕಪ್ ಸೆಮಿ ಫೈನಲ್‌ನಲ್ಲಿ ಕೇವಲ ಒಂದೇ ಒಂದು ನೋ-ಬಾಲ್ ಎಸೆದಿರುವುದಕ್ಕೆ ತನ್ನನ್ನು ಖಳನಾಯಕನಂತೆ ಬಿಂಬಿಸಬೇಡಿ ಎಂದು ಭಾರತದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಆಗ್ರಹಿಸಿದ್ದಾರೆ.
ವೆಸ್ಟ್‌ಇಂಡೀಸ್ ವಿರುದ್ಧ ವಿಶ್ವಕಪ್ ಪಂದ್ಯದಲ್ಲಿ ಭಾರತದ ಬೌಲರ್‌ಗಳು ಒಟ್ಟು ಎರಡು ನೋ-ಬಾಲ್ ಎಸೆದಿದ್ದು, ಇದು ಭಾರತದ ಸೋಲಿಗೆ ಪ್ರಮುಖ ಕಾರಣವಾಗಿತ್ತು. ಅಶ್ವಿನ್ ಹಾಗೂ ಹಾರ್ದಿಕ್ ಪಾಂಡ್ಯ ಎಸೆದಿದ್ದ ನೋ-ಬಾಲ್‌ನಿಂದಾಗಿ ಔಟಾಗುವುದರಿಂದ ಬಚಾವಾಗಿದ್ದ ವಿಂಡೀಸ್‌ನ ಅಗ್ರ ಕ್ರಮಾಂಕದ ದಾಂಡಿಗ ಲೆಂಡ್ಲ್ ಸಿಮೊನ್ಸ್ ಔಟಾಗದೆ ಅರ್ಧಶತಕವನ್ನು ಸಿಡಿಸಿ ತನ್ನ ತಂಡವನ್ನು ಫೈನಲ್‌ಗೆ ತಲುಪಿಸಿದ್ದರು.
‘‘ನಾನು ಮನೆಗೆ ತೆರಳಿದ್ದಾಗ ನನ್ನ ನಾಯಿ ಬಿಸಿಲಿನಿಂದ ಬೆಂಡಾಗಿ ಹೋಗಿ ಫೀಟ್ಸ್ ಬಂದವರಂತೆ ವರ್ತಿಸುತ್ತಿತ್ತು. ಜೀವನದಲ್ಲಿ ಯಾವುದು ಮುಖ್ಯ, ಯಾವುದು ಅತ್ಯಂತ ಎನ್ನುವುದು ನನ್ನ ನಾಯಿ ತೋರಿಸಿಕೊಟ್ಟಿತು. ನಾನು ಮೂರು ದಿನಗಳ ಕಾಲ ದಿನಪತ್ರಿಕೆಗಳನ್ನು ಓದಲೇ ಇಲ್ಲ. ಜನರು ಏನು ಹೇಳುತ್ತಿದ್ದಾರೆಂಬ ಬಗ್ಗೆ ಓದಲು ಹೋಗಲಿಲ್ಲ’’ ಎಂದು ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್ ಟೂರ್ನಿಯ ಉದ್ಘಾಟನಾ ಪಂದ್ಯದ ಮೊದಲು ಸುದ್ದಿಗಾರರಿಗೆ ಅಶ್ವಿನ್ ಹೇಳಿದ್ದಾರೆ.
‘‘ನಾನು ಇದುವರೆಗೆ ಒಂದೂ ನೋ-ಬಾಲ್ ಎಸೆದಿಲ್ಲ ಎಂಬ ಬಗ್ಗೆ ಪತ್ರಕರ್ತರಿಗೆ ಚೆನ್ನಾಗಿ ತಿಳಿದಿದೆ. ವಿಶ್ವಕಪ್‌ನಲ್ಲಿ ಕೇವಲ ಒಂದು ನೋ-ಬಾಲ್ ಎಸೆದ ಮಾತ್ರಕ್ಕೆ ನಾನು ವಿಲನ್ ಆಗಲಾರೆ’’ಎಂದು ಈ ಬಾರಿಯ ಐಪಿಎಲ್‌ನಲ್ಲಿ ಧೋನಿ ನಾಯಕತ್ವದ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಅಶ್ವಿನ್ ಹೇಳಿದ್ದಾರೆ.
‘‘ಪಿಚ್‌ನಲ್ಲಿ ಇಬ್ಬನಿ ಇದ್ದಾಗ ನಾನು ಬೌಲಿಂಗ್ ಮಾಡುವುದಿಲ್ಲ. ಇಬ್ಬನಿ ಇದ್ದಾಗ ಬೌಲಿಂಗ್ ಮಾಡುವಾಗ ಏನಾಗುತ್ತದೆ ಎಂದು ನನಗೆ ಗೊತ್ತಿಲ್ಲ. ಸೆಮಿಫೈನಲ್‌ನಲ್ಲಿ ನಾನು ಎಸೆದಿದ್ದ 2 ಓವರ್ ಬೌಲಿಂಗ್‌ನಲ್ಲಿ ವಿಕೆಟ್ ಕಬಳಿಸಲು ಯತ್ನಿಸಿದ್ದೆ’’ ಎಂದು ಅಶ್ವಿನ್ ಅಭಿಪ್ರಾಯಪಟ್ಟರು.







