ಇಮ್ರಾನ್ ಹಶ್ಮಿ ಪುತ್ರ ತಂದೆಯನ್ನೂ ಮೀರಿಸಿದ ಸೂಪರ್‌ಸ್ಟಾರ್: ಕೇಜ್ರಿವಾಲ್

ಹೊಸದಿಲ್ಲಿ.ಎ.8: ತನ್ನ ಮಗನ ಕ್ಯಾನ್ಸರ್ ಕಾಯಿಲೆಯ ವಿರುದ್ಧದ ಹೋರಾಟದಲ್ಲಿ ಯಶಸ್ವಿಯಾಗಿದ್ದಕ್ಕಾಗಿ ಬಾಲಿವುಡ್ ನಟ ಇಮ್ರಾನ್ ಹಶ್ಮಿ ಅವರನ್ನು ಅಭಿನಂದಿಸಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು,ಅಯಾನ್ ತನ್ನ ತಂದೆಗಿಂತ ದೊಡ್ಡ ಸೂಪರ್‌ಸ್ಟಾರ್ ಆಗಿದ್ದಾನೆ ಎಂದು ಬಣ್ಣಿಸಿದರು.
ಗುರುವಾರ ಸಂಜೆ ಇಲ್ಲಿಯ ಇಸ್ಲಾಮಿಕ್ ಕಲ್ಚರಲ್ ಸೆಂಟರ್‌ನಲ್ಲಿ ನಡೆದ ಹಶ್ಮಿಯವರ ಚೊಚ್ಚಲು ಕೃತಿ ‘ಕಿಸ್ ಆಫ್ ಲೈಫ್ ’ನ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಹಶ್ಮಿ ಮತ್ತು 21ರ ಹರೆಯದ ಬಿಲಾಲ್ ಸಿದ್ದಿಕಿ ಅವರು ರಚಿಸಿರುವ ಈ ಪುಸ್ತಕವು ತಮ್ಮ ನಾಲ್ಕರ ಹರೆಯದ ಪುತ್ರ ಅಯಾನ್‌ನನ್ನು ಮೂತ್ರಪಿಂಡ ಕ್ಯಾನ್ಸರ್‌ನ ಮೃತ್ಯುದವಡೆಯಿಂದ ಉಳಿಸಿಕೊಳ್ಳಲು ಹಶ್ಮಿ ಮತ್ತು ಅವರ ಪತ್ನಿ ನಡೆಸಿದ ಸುದೀರ್ಘ ಹೋರಾಟದ ಕಥೆಯನ್ನು ಒಳಗೊಂಡಿದೆ. ಅಯಾನ್ ಈಗ ಕ್ಯಾನ್ಸರ್ ಮುಕ್ತ ಎಂದು ವೈದ್ಯಕೀಯವಾಗಿ ಘೋಷಿಸಲ್ಪಟ್ಟಿದ್ದಾನೆ.
ಅಯಾನ್ ಮೂತ್ರಪಿಂಡ ಕ್ಯಾನ್ಸರ್‌ಗೆ ಗುರಿಯಾಗಿದ್ದಾನೆ ಎನ್ನುವುದು ಪತ್ತೆಯಾದ ನಂತರ ಆತನನ್ನು ಏಳು ತಿಂಗಳ ಸುದೀರ್ಘ ಚಿಕಿತ್ಸೆಗಾಗಿ ಕೆನಡಾಕ್ಕೆ ಕರೆದೊಯ್ಯಲಾಗಿತ್ತು. ಈ ಚಿಕಿತ್ಸೆ ಯಾತನಾಮಯವಾಗಿರುವ ಜೊತೆಗೆ ಅತ್ಯಂತ ದುಬಾರಿಯೂ ಆಗಿತ್ತು.
ಇಂತಹ ದುಬಾರಿ ಚಿಕಿತ್ಸೆಯ ಹೊರೆಯನ್ನು ಭರಿಸಲು ಸಮರ್ಥರಾದ ಹಶ್ಮಿ ನಿಜಕ್ಕೂ ಅದೃಷ್ಟವಂತರು ಎಂದ ಕೇಜ್ರಿವಾಲ್, ಪ್ರತಿಯೊಬ್ಬರಿಗೂ ದುಬಾರಿ ಚಿಕಿತ್ಸೆಯ ಹೊರೆಯನ್ನು ಹೊರುವ ಸಾಮರ್ಥ್ಯವಿರುವುದಿಲ್ಲ ಎಂದು ಬೆಟ್ಟು ಮಾಡಿದರು. ಅಂತಹವರಿಗೆ ನೆರವಾಗುವುದು ಸರಕಾರದ ಕರ್ತವ್ಯವಾಗಿದೆ ಎಂದ ಅವರು,ಈ ನಿಟ್ಟಿನಲ್ಲಿ ತನ್ನ ಸರಕಾರವು ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದೆ ಎಂದರು.







