ನೀವು ನಿಮ್ಮ ಪತ್ನಿಯೊಂದಿಗೆ ಸಂತೋಷವಾಗಿದ್ದೀರಾ.... ಪತ್ರಕರ್ತರನ್ನು ಪ್ರಶ್ನಿಸಿದ ರೈನಾ!

ಮುಂಬೈ, ಎ.8: ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ ಎಂಬ ಮಾತು ಭಾರತದ ಕ್ರಿಕೆಟಿಗರಿಗೆ ಚೆನ್ನಾಗಿ ಒಪ್ಪುತ್ತದೆ. ಅದಕ್ಕೆ ಉದಾಹರಣೆ ಇಲ್ಲಿದೆ ಓದಿ....
ಇಂದಿನ ದಿನಗಳಲ್ಲಿ ಭಾರತದ ಕ್ರಿಕೆಟಿಗರು ನೇರ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡುತ್ತಿಲ್ಲ. ಪ್ರಶ್ನೆಯನ್ನು ಲಘುವಾಗಿ ತೆಗೆದುಕೊಂಡು ಹಾಸ್ಯದ ಹೊನಲು ಹರಿಸುತ್ತಿರುತ್ತಾರೆ. ಟ್ವೆಂಟಿ-20 ನಾಯಕ ಎಂಎಸ್ ಧೋನಿ ಇತ್ತೀಚೆಗೆ ನಿವೃತ್ತಿಯ ಕುರಿತು ಕೇಳಿದ ಪ್ರಶ್ನೆಗೆ ಪತ್ರಕರ್ತನಿಗೆ ಮರು ಪ್ರಶ್ನೆ ಕೇಳಿದ ಪ್ರಸಂಗ ಇನ್ನೂ ಹಸಿರಾಗಿರುವಾಗಲೇ, ಧೋನಿಯ ಸಹ ಆಟಗಾರ ಸುರೇಶ್ ರೈನಾ ನಾಯಕನ ಹಾದಿ ತುಳಿದಿದ್ದಾರೆ.
ಮುಂಬೈನಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶದ ಎಡಗೈ ದಾಂಡಿಗ ರೈನಾ ಅವರಲ್ಲಿ ಭಾರತೀಯ ತಂಡದಲ್ಲಿ ಭಾರತದ ಕೋಚ್ ಇದ್ದರೆ ಖುಷಿಯಾಗುತ್ತದೋ ಅಥವಾ ವಿದೇಶೀ ಕೋಚ್ ಬೇಕೋ ಎಂಬ ಪ್ರಶ್ನೆ ಕೇಳಲಾಯಿತು.
ಇದಕ್ಕೆ ನೇರ ಉತ್ತರ ನೀಡದ ರೈನಾ, ನನಗೆ ನೀವೇ ಹೇಳಿ ಸಾರ್, ನೀವು ನಿಮ್ಮ ಪತ್ನಿಯೊಂದಿಗೆ ಸಂತೋಷವಾಗಿದ್ದೀರೊ ಅಥವಾ ಬೇರೊಬ್ಬರ ಪತ್ನಿಯೊಂದಿಗೆ ಸಂತೋಷವಾಗಿರುತ್ತೀರೊ? ಎಂದು ಮರು ಪ್ರಶ್ನೆ ಕೇಳಿದ್ದಾರೆ. ಆಗ ಅಲ್ಲಿ ನೆರೆದಿದ್ದ ಪತ್ರಕರ್ತರೆಲ್ಲರೂ ನಗೆಗಡಲಲ್ಲಿ ತೇಲಿದರು. ರೈನಾ ಪತ್ರಕರ್ತರಿಗೆ ನೀಡಿದ ಉತ್ತರದ ವಿಡಿಯೋ ಈಗಾಗಲೇ ಎಲ್ಲೆಡೆ ಹರಿದಾಡಲಾರಂಭಿಸಿದೆ.







