ಐದು ರಾಜ್ಯಗಳ ಬಿಜೆಪಿ ಅಧ್ಯಕ್ಷರ ಬದಲಾವಣೆ

ಹೊಸದಿಲ್ಲಿ, ಎಪ್ರಿಲ್.8:ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷರಾಗಿ ಕೇಶವ ಪ್ರಸಾದ್ ಮೌರ್ಯರನ್ನು ಬಿಜೆಪಿ ನೇಮಕಗೊಳಿಸಿರುವುದಾಗಿ ವರದಿಗಳು ತಿಳಿಸಿವೆ.ಉತ್ತರ ಪ್ರದೇಶದ ವಿಧಾನಸಭೆಗೆ 2017ರಲ್ಲಿ ಚುನಾವಣೆ ನಡೆಯಲಿದ್ದು ಹೊಸ ಅಧ್ಯಕ್ಷರನ್ನಾಗಿ ಅವರ ಹೆಸರನ್ನು ಬಿಜೆಪಿ ಘೋಷಿಸಿದ್ದು ಅವರು ಉತ್ತರ ಪ್ರದೇಶದ ಹಿಂದುಳಿದ ವರ್ಗದ ಪ್ರತಿನಿಧಿಯಾಗಿದ್ದಾರೆ.
ಕೇಂದ್ರ ಸಚಿವ ವಿಜಯ ಸಾಂಪಲಾರನ್ನು ಪಂಜಾಬ್ ಅಧ್ಯಕ್ಷರನ್ನಾಗಿ, ಯಡಿಯೂರಪ್ಪರನ್ನು ಕರ್ನಾಟಕದ ಅಧ್ಯಕ್ಷರನ್ನಾಗಿ, ಡಾ. ಕೆ. ಲಕ್ಷ್ಮಣ್‌ರನ್ನು ತೆಲಂಗಾಣದ ಅಧ್ಯಕ್ಷರನ್ನಾಗಿ, ತಾಪಿರ್ ಗಾವೋರನ್ನು ಅರುಣಾಚಲ ಪ್ರದೇಶದ ಅಧ್ಯಕ್ಷರನ್ನಾಗಿ ಬಿಜೆಪಿ ನೇಮಿಸಿದೆ ಎಂದು ವರದಿಯಾಗಿದೆ. ಬಿಜೆಪಿ ನಂಬಿಕಸ್ಥ ಮೂಲಗಳ ಪ್ರಕಾರ ಉತ್ತರ ಪ್ರದೇಶ ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿಯಾರಾಗಲಿದ್ದಾರೆಂದು ಈಗ ನಿರ್ಣಯಿಸಲಾಗಿಲ್ಲ. ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಸ್ಥಾನಕ್ಕೆ ಯಾರು ಎಂಬುದನ್ನು ನಿರ್ಣಯಿಸಲಿದೆ ಎಂದು ತಿಳಿಸಿರುವುದಾಗಿ ವರದಿಯಾಗಿದೆ. ಉತ್ತರ ಪ್ರದೇಶದ ಹೊಸ ಅಧ್ಯಕ್ಷರ ಮೇಲೆ ಹತ್ಯೆ ಸಹಿತ ವಿಭಿನ್ನ ಹತ್ತು ಮೊಕದ್ದಮೆಗಳು ದಾಖಲಾಗಿವೆ. 2011ರಲ್ಲಿ ನಡೆದ ಮುಹಮ್ಮದ್ ಗೌಸ್ ಹತ್ಯಾಕಾಂಡದಲ್ಲಿ ಅವರು ಆರೋಪಿಯಾಗಿದ್ದಾರೆ. ಬಾಲ್ಯದಿಂದಲೇ ಸಂಘರ್ಷ ಪೂರ್ಣವಾಗಿ ಬದುಕಿದ ಕೇಶವ ಮೌರ್ಯರಲ್ಲಿ ಈಗ ಕೋಟ್ಯಂತರ ರೂಪಾಯಿಯ ಆಸ್ತಿ ಇದೆ. ಲೋಕಸಭಾ ಚುನಾವಣೆಯ ವೇಳೆ ನೀಡಿದ ಅಫಿದಾವಿತ್‌ನಲ್ಲಿ ಅವರಿಗೆ ಮತ್ತು ಅವರ ಪತ್ನಿಯ ಹೆಸರಿನಲ್ಲಿ ಪೆಟ್ರೋಲ್ ಪಂಪ್ ಇವೆ. ಮಾತ್ರವಲ್ಲ, ಜೀವನ್‌ಜ್ಯೋತಿ ಆಸ್ಪತ್ರೆಯಲ್ಲಿ ಪಾಲುದಾರಾಗಿದ್ದಾರೆಂದು ವರದಿಗಳು ತಿಳಿಸಿವೆ.





