ವೃದ್ಧರು-ಅಶಕ್ತರು-ರೋಗಿಗಳ ಹಕ್ಕುಗಳನ್ನು ಏಕೆ ಜಾರಿಗೊಳಿಸಿಲ್ಲ?
ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ
ಹೊಸದಿಲ್ಲಿ, ಎ.8: ಸುಪ್ರೀಂಕೋರ್ಟ್ ಇಂದು, ವೃದ್ಧರು, ನಿರ್ಬಲರು ಹಾಗೂ ರೋಗಗ್ರಸ್ತರ ಹಕ್ಕುಗಳನ್ನು ರಕ್ಷಿಸುವ ಕಾನೂನುಗಳ ಕುರಿತಾದ ಅರ್ಜಿಯೊಂದನ್ನು ವಿಚಾರಣೆಗೆತ್ತಿಕೊಂಡಿದೆ. ಅವುಗಳನ್ನು ಯಾಕೆ ಜಾರಿಗೊಳಿಸಲು ಸಾಧ್ಯವಾಗಿಲ್ಲವೆಂದು ಅದು ಕೇಂದ್ರ ಸರಕಾರವನ್ನು ಪ್ರಶ್ನಿಸಿದೆ.
ಮುಖ್ಯನ್ಯಾಯಮೂರ್ತಿ ಟಿ.ಎಸ್.ಠಾಕೂರ್, ನ್ಯಾಯಮೂರ್ತಿಗಳಾದ ಆರ್. ಭಾನುಮತಿ ಹಾಗೂ ಉದಯ್‌ಉಮೇಶ್ ಲಾಲರಿದ್ದ ಪೀಠವೊಂದು, ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ನಾಯಕ ಅಶ್ವಿನಿ ಕುಮಾರ್ ದಾಖಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ಸಂಬಂಧ ಸರಕಾರಕ್ಕೆ ನೋಟಿಸ್ ನೀಡಿದೆ.
ವೃದ್ಧರು, ಅಶಕ್ತರು ಹಾಗೂ ರೋಗಗ್ರಸ್ತರ ಹಕ್ಕುಗಳನ್ನು ರಕ್ಷಿಸಲು 6 ಕೇಂದ್ರೀಯ ಕಾನೂನುಗಳಿವೆ. ಆದರೆ, ಅವುಗಳಲ್ಲಿ ಒಂದನ್ನೂ ಜಾರಿಗೊಳಿಸಿಲ್ಲವೆಂದು ಅರ್ಜಿದಾರರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.ತಾನು ಮೊದಲು ಕೇಂದ್ರ ಸರಕಾರದ ಹೇಳಿಕೆಯನ್ನು ಆಲಿಸುತ್ತೇವೆ. ವಿಸ್ತೃತ ಮಾನದಂಡವನ್ನು ನಿರ್ಧರಿಸುತ್ತೇನೆ. ಆ ಬಳಿಕವಷ್ಟೇ ರಾಜ್ಯಗಳನ್ನು ಕರೆಯುತ್ತೇನೆಂದು ನ್ಯಾಯಪೀಠ ತಿಳಿಸಿತು. ಈ ವಿಷಯದಲ್ಲಿ ನ್ಯಾಯಾಲಯದ ಸಲಹೆಗಾರನಾಗುವಂತೆ ಅದು ‘ಹೆಲ್ಪ್ ಏಜ್ ಇಂಡಿಯಾ’ ಎಂಬ ಸರಕಾರೇತರ ಸಂಘಟನೆಯನ್ನು ವಿನಂತಿಸಿದೆ.
ವೃದ್ಧರು ಬಲಹೀನರು ಹಾಗೂ ಕಾಯಿಲೆ ಪೀಡಿತರ ಹಕ್ಕುಗಳ ರಕ್ಷಣೆಗೆ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ (ಎನ್‌ಎಎಲ್‌ಎಸ್‌ಎ) ಯಾವುದೇ ಕಾರ್ಯಕ್ರಮವಿದೆಯೇ ಎಂದು ಕೇಳಿ ಅದಕ್ಕೆ ನ್ಯಾಯಪೀಠ ನೋಟಿಸ್ ನೀಡಿದೆ.
ಇಲ್ಲದಿದ್ದಲ್ಲಿ, ಎನ್‌ಎಎಲ್‌ಎಸ್‌ಎ ಅಂತಹ ಕಾರ್ಯಕ್ರಮವನ್ನು ರೂಪಿಸುವ ಬಗ್ಗೆ ಸೂಚಿಸಲಿದೆಯೆಂದು ಅದು ಹೇಳಿದೆ.







