ಎನ್‌ಐಎ ಕೋರ್ಟ್‌ನಲ್ಲಿ ಸಾಕ್ಷಿಗಳ ಹೇಳಿಕೆ ದಾಖಲೆಗಳು ನಾಪತ್ತೆ

ಮಾಲೆಗಾಂವ್ ಸ್ಫೋಟ ಪ್ರಕರಣದ ವಿಚಾರಣೆಯ ದಾರಿತಪ್ಪಿಸುವ ಸಂಚು?
ಮುಂಬೈ, ಎ.8: 2008ರ ಮಾಲೆಗಾಂವ್ ಸರಣಿ ಸ್ಫೋಟ ಪ್ರಕರಣಕ್ಕೆ ಭಾರೀ ಹಿನ್ನಡೆ ಯುಂಟು ಮಾಡುವಂತಹ ಬೆಳವಣಿಗೆಯೊಂದರಲ್ಲಿ, ಮ್ಯಾಜಿಸ್ಟ್ರೇಟರ ಮುಂದೆ ದಾಖಲಿಸಲ್ಪಟ್ಟಿದ್ದ ಏಳು ಮಂದಿ ಸಾಕ್ಷಿಗಳ ಹೇಳಿಕೆಗಳು, ವಿಶೇಷ ಎನ್‌ಐಎ ನ್ಯಾಯಾಲಯದಲ್ಲಿ ನಿಗೂಢವಾಗಿ ನಾಪತ್ತೆಯಾಗಿದೆ. ಈ ಹೇಳಿಕೆಗಳನ್ನು ಸ್ವೀಕಾರಾರ್ಹವಾದ ಪುರಾವೆಗಳೆಂಬುದಾಗಿ ವಿಚಾರಣಾ ನ್ಯಾಯಾಲಯವು ಪರಿಗಣಿಸಿತ್ತು.
ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಮೃದು ವಾಗಿ ವರ್ತಿಸುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ತನ್ನ ಮೇಲೆ ಒತ್ತಡ ಹೇರಿದ್ದರೆಂದು ಕಳೆದ ವರ್ಷದ ಜೂನ್‌ನಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ರೋಹಿಣಿ ಸಾಲ್ಯಾನ್ ಆಪಾದಿಸಿದ್ದ ಹಿನ್ನೆಲೆಯಲ್ಲಿ ಈ ನಿರ್ಣಾಯಕವಾದ ದಾಖಲೆಗಳು ಹಠಾತ್ತನೆ ಕಣ್ಮರೆಯಾಗಿರುವುದು, ಪ್ರಕರಣವನ್ನು ಮುಂದುವರಿಸುವ ಬಗ್ಗೆ ಪ್ರಾಸಿಕ್ಯೂಶನ್‌ಗೆ ಇರುವ ಇಚ್ಛಾಶಕ್ತಿ ಹಾಗೂ ಸಾಮರ್ಥ್ಯವನ್ನು ಪ್ರಶ್ನಾರ್ಹವಾಗುವಂತೆ ಮಾಡಿದೆ. ಮಾಲೆಗಾಂವ್‌ನ ಭಿಕ್ಕುಚೌಕದಲ್ಲಿ 2008ರ ಸೆಪ್ಟೆಂಬರ್ 28ರಂದು ನಡೆದ ಎರಡು ಕಡಿಮೆ ತೀವ್ರತೆಯ ಸ್ಫೋಟಗಳಲ್ಲಿ ಏಳು ಮಂದಿ ಮೃತಪಟ್ಟು, 80ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಈ ಪ್ರಕರಣದ ತನಿಖೆಯನ್ನು ಮೊದಲಿಗೆ ಮಹಾರಾಷ್ಟ್ರ ಪೊಲೀಸ್ ಇಲಾಖೆಯ ಭಯೋತ್ಪಾದನಾ ವಿರೋಧಿ ದಳವು ಕೈಗೆತ್ತಿಕೊಂಡಿತ್ತಾದರೂ, 2011ರಲ್ಲಿ ಅದನ್ನು ಎನ್‌ಐಎಗೆ ಹಸ್ತಾಂತರಿಸಿತ್ತು.
ಪ್ರಕರಣಕ್ಕೆ ಸಂಬಂಧಿಸಿ ಸ್ವಘೋಷಿತ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್, ಭಾರತೀಯ ಸೇನಾಪಡೆಯ ಅಧಿಕಾರಿ ಲೆ.ಕ. ಶ್ರೀಕಾಂತ್ ಪುರೋಹಿತ್ ಸೇರಿದಂತೆ 12ಕ್ಕೂ ಅಧಿಕ ಮಂದಿ ಆರೋಪಿಗಳನ್ನು ಎನ್‌ಐಎ ಬಂಧಿಸಿತ್ತು. ಈ ಆರೋಪಿಗಳು ‘ಅಭಿನವ್ ಭಾರತ್’ ಎಂಬ ಕೇಸರಿ ಭಯೋತ್ಪಾದಕ ಸಂಘಟನೆಗಾಗಿ ಕೆಲಸ ಮಾಡುತ್ತಿದ್ದರೆಂದು ಎನ್‌ಐಎ ಆಪಾದಿಸಿದೆ.
ಇದೀಗ ಸಾಕ್ಷಿಗಳ ಹೇಳಿಕೆಗಳ ದಾಖಲೆಗಳ ಕಣ್ಮರೆಯಿಂದ ಮುಜುಗರಕ್ಕೀಡಾಗಿರುವ ಎನ್‌ಐಎ, ಅವುಗಳ ಪತ್ತೆಗಾಗಿ ಮೂರು ತಂಡಗಳನ್ನು ರಚಿಸಿವೆ. ನ್ಯಾಯಾಲಯದ ಅಧಿಕಾರಿಗಳು ಕೂಡಾ ಈ ಶೋಧ ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ಪ್ರಕರಣದ ಸಾರ್ವಜನಿಕ ಅಭಿಯೋಜಕಿಯಾಗಿದ್ದ ರೋಹಿಣಿ ಸಾಲ್ಯಾನ್ ಕಳೆದ ವರ್ಷ ತನ್ನ ಹುದ್ದೆಯನ್ನು ತ್ಯಜಿಸಿದ್ದರು. ಪ್ರಕರಣದ ಬಗ್ಗೆ ಹೆಚ್ಚು ಕಠಿಣವಾಗಿ ವರ್ತಿಸಕೂಡದೆಂದು ಎನ್‌ಐಎ ತಮ್ಮ ಮೇಲೆ ಒತ್ತಡ ಹೇರಿತ್ತೆಂದು ಆಕೆ ಆಪಾದಿಸಿದ್ದರು.
ಕಳೆದ ಬುಧವಾರ ವಿಶೇಷ ಎನ್‌ಐಎ ನ್ಯಾಯಾಲಯದ ಅಧಿಕಾರಿಯೊಬ್ಬರು ತನ್ನ ಬಳಿಗೆ ಬಂದು, ಈ ದಾಖಲೆಗಳು ತನ್ನ ಬಳಿ ಇರುವುದೇ ಎಂದು ಕೇಳಿದ್ದರೆಂದು ರೋಹಿಣಿ ಬುಧವಾರ ದಿ ಮಿರರ್ ಪತ್ರಿಕೆಗೆ ಬಹಿರಂಗಪಡಿಸಿದ್ದರು. ‘‘ಕ್ರಿಮಿನಲ್ ದಂಡ ಸಂಹಿತೆಯ 164 ಸೆಕ್ಷನ್‌ನಡಿ ದಾಖಲಿಸಲ್ಪಟ್ಟಿದ್ದ ಹಲವು ಸಾಕ್ಷಿಗಳ ಹೇಳಿಕೆಗಳು ಸೇರಿದಂತೆ ಪ್ರಮುಖ ದಾಖಲೆಗಳು ತಮ್ಮ ಬಳಿಯಿದೆಯೇ ಎಂದು ವಿಶೇಷ ನ್ಯಾಯಾಲಯದ ಸಿಬ್ಬಂದಿಯೊಬ್ಬರು ನನ್ನನ್ನು ವಿಚಾರಿಸಿದ್ದರು. ಈ ದಾಖಲೆಗಳ ಮೂಲ ಪ್ರತಿಗಳು ನ್ಯಾಯಾಲಯದಲ್ಲಿ ಕಾಣಸಿಗುತ್ತಿಲ್ಲವೆಂದು ಆ ಅಧಿಕಾರಿ ಹೇಳಿದ್ದರು’’ ಎಂದು ರೋಹಿಣಿ ತಿಳಿಸಿದ್ದರು.
ತಾನು ಈ ಎಲ್ಲಾ ದಾಖಲೆಗಳನ್ನು ಎನ್‌ಐಎ ಅಧಿಕಾರಿಗಳ ಸಮಕ್ಷಮದಲ್ಲಿ ನಿಯೋಜಿತ ವಿಶೇಷ ಪ್ರಾಸಿಕ್ಯೂಟರ್ ಅವಿನಾಶ್ ರಾಸಲ್ ಅವರಿಗೆ ಹಸ್ತಾಂತರಿಸಿದ್ದಾಗಿ ರೋಹಿಣಿ ತಿಳಿಸಿದ್ದಾರೆ. ‘‘ಈ ಪ್ರಕರಣಕ್ಕೆ ಸಂಬಂಧಪಟ್ಟ ಒಂದೇ ಒಂದು ದಾಖಲೆಯನ್ನು ಕೂಡಾ ನನ್ನಲ್ಲಿ ಇರಿಸಿಕೊಂಡಿಲ್ಲ ’’ ಎಂದು ಅವರು ಹೇಳಿದ್ದಾರೆ.
ಈ ಮಧ್ಯೆ ಹಾಲಿ ಪಬ್ಲಿಕ್ ಪ್ರಾಸಿಕ್ಯೂಟರ್ ರಾಸಲ್ ಅವರು ಪ್ರಕರಣದ ಪ್ರಮುಖ ಸಾಕ್ಷಿಗಳ ಹೇಳಿಕೆಗಳ ದಾಖಲೆಗಳು ನಾಪತ್ತೆಯಾಗಿರುವುದು ತನಗೆ ತಿಳಿದಿಲ್ಲವೆಂದು ಹೇಳಿದ್ದಾರೆ. ಆದರೆ ಕೆಲವು ದಾಖಲೆಗಳು ಸ್ಥಾನಪಲ್ಲಟಗೊಂಡಿರುವ ಸಾಧ್ಯತೆಯಿದೆಯೆಂದು ಅವರು ಶಂಕಿಸಿದ್ದಾರೆ. ಈ ದಾಖಲೆಗಳು ಆಗಾಗ್ಗೆ ಒಂದು ನ್ಯಾಯಾಲಯದಿಂದ ಇನ್ನೊಂದು ನ್ಯಾಯಾಲಯಕ್ಕೆ ಚಲಿಸುತ್ತಲೇ ಇದ್ದವು. ಒಂದು ವೇಳೆ ದಾಖಲೆಗಳು ಎನ್‌ಐಎ ಕೋರ್ಟ್‌ನಲ್ಲಿ ಇಲ್ಲವೆಂದಾದರೆ, ಅವು ಬೇರೆಲ್ಲಿಯೋ ಇರಬೇಕು.ನ್ಯಾಯಾಲಯದ ಅಧಿಕಾರಿಗಳು ಅವುಗಳನ್ನು ಪತ್ತೆಹಚ್ಚಲು ಸಮರ್ಥರಾಗಿರಬೇಕು ಎಂದವರು ಹೇಳಿದ್ದಾರೆ.
ಮಾಲೆಗಾಂವ್ ಸ್ಫೋಟ ಪ್ರಕರಣದ ತಲೆಮರೆಸಿಕೊಂಡಿರುವ ಅರೋಪಿ ರಾಮ್‌ಜಿ ಕಾಲಾಸಂಗ್ರಾನ ನಿಕಟವರ್ತಿ ಧರ್ಮೇಂದ್ರ ಭೈರಾಗಿಯ ಹೇಳಿಕೆಗಳು ಕೂಡಾ ಕಾಣೆಯಾಗಿರುವ ಸಾಕ್ಷಿಗಳ ಹೇಳಿಕೆಗಳಲ್ಲಿ ಸೇರಿವೆ. 2008ರಲ್ಲಿ ನಡೆದ ಮಾಲೆಗಾಂವ್ ಸ್ಫೋಟಕ್ಕೆ ಕೆಲವೇ ತಿಂಗಳುಗಳ ಮೊದಲು ತಾನು ಕಾಲಾಸಂಗ್ರಾ ಹಾಗೂ ಪ್ರಜ್ಞಾ ಠಾಕೂರ್ ಜೊತೆ ಉಜ್ಜಯನಿಯಲ್ಲಿ ನಡೆದ ಮಾತುಕತೆಗೆ ಸಾಕ್ಷಿಯಾಗಿದ್ದಾಗಿ ಭೈರಾಗಿ, ಮ್ಯಾಜಿಸ್ಟ್ರೇಟರ ಮುಂದೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾನೆ. ಮಾಲೆಗಾಂವ್ ಸ್ಫೋಟಕ್ಕೆ ಸಂಚುಗಳನ್ನು ರೂಪಿಸಲು ಅವರಿಬ್ಬರು ಚರ್ಚಿಸುತ್ತಿದ್ದುದನ್ನು ತಾನು ಕೇಳಿರುವುದಾಗಿ ಭೈರಾಗಿ ಸಾಕ್ಷಿ ನೀಡಿದ್ದಾನೆ.
ಅಭಿನವ್ ಭಾರತ್‌ನ ಸಂಸ್ಥಾಪಕಿ ಹಿಮಾನಿ ಸಾವರ್ಕರ್ ಅವರ ಹೇಳಿಕೆ ಕೂಡಾ ನಾಪತ್ತೆಯಾಗಿರುವ ಇನ್ನೊಂದು ಪ್ರಮುಖ ಪುರಾವೆಯಾಗಿದೆ. ಲೆ.ಕ.ಪುರೋಹಿತ್ ಹಾಗೂ ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್ ನಡುವೆ 2007ರಲ್ಲಿ ನಾಸಿಕ್‌ನಲ್ಲಿ ಮಾತುಕತೆಗಳ ಬಗ್ಗೆಯೂ ಸಾವರ್ಕರ್ ತನ್ನ ಹೇಳಿಕೆಯಲ್ಲಿ ವಿವರಿಸಿದ್ದರು.
ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ದಾಖಲೆಗಳು ಕಣ್ಮರೆಗೊಂಡಿರುವುದು ಆಘಾತಕಾರಿಯೆಂದು ಖ್ಯಾತ ಕ್ರಿಮಿನಲ್ ನ್ಯಾಯವಾದಿ ಮಜೀದ್ ಮೆಮನ್ ಆತಂಕ ವ್ಯಕ್ತಪಡಿಸಿದ್ದಾರೆ. ‘‘ಇದೊಂದು ಭಯೋತ್ಪಾದನೆಗೆ ಸಂಬಂಧಿಸಿದ ಪ್ರಕರಣವಾಗಿರುವುದರಿಂದ, ಮಹತ್ವದ ದಾಖಲೆಗಳ ಬಗ್ಗೆ ನಿರ್ಲಕ್ಷ ವಹಿಸಿರುವುದು ತೀರಾ ಗಂಭೀರ ವಿಷಯವಾಗಿದೆ. ಇಂತಹ ಲೋಪಗಳನ್ನು ನ್ಯಾಯಾಲಯ ಸಹಿಸಕೂಡದು ಎಂದವರು ಹೇಳಿದ್ದಾರೆ. ಪ್ರಕರಣವನ್ನು ದುರ್ಬಲಗೊಳಿಸುವ ಹಾಗೂ ಆರೋಪಿಗಳಿಗೆ ನೆರವಾಗುವ ದುರುದ್ದೇಶದಿಂದ ದಾಖಲೆಗಳನ್ನು ಕಣ್ಮರೆ ಮಾಡಲಾಗಿದೆಯೆಂದವರು ಆಪಾದಿಸಿದ್ದಾರೆ.
ನಾಪತ್ತೆಯಾಗಿರುವ ಹೇಳಿಕೆಗಳು ಆರೋಪಿಗಳ ಬಳಿಯಿರುತ್ತಾವಾದರೂ, ಮೂಲಪ್ರತಿಗಳ ಅನುಪಸ್ಥಿತಿಯಲ್ಲಿ ಅವುಗಳನ್ನು ಎರಡನೆ ದರ್ಜೆಯ ಪುರಾವೆಯಾಗಿ ಪರಿಗಣಿಸಲಾಗುತ್ತದೆ. ಮ್ಯಾಜಿಸ್ಟ್ರೇಟರ ಮುಂದೆ ದಾಖಲಿಸಲಾದ ಹೇಳಿಕೆಗಳಿಗೆ ವಿಚಾರಣಾ ನ್ಯಾಯಾಲಯದಲ್ಲಿ ವೌಲ್ಯವಿರುತ್ತದೆ. ಹೊಸದಾಗಿ ಹೇಳಿಕೆಯನ್ನು ನೀಡಲು ವಿಚಾರಣಾ ನ್ಯಾಯಾಲಯವು ಸಾಕ್ಷಿಗಳನ್ನು ಕರೆಸಿಕೊಳ್ಳಬಹುದಾಗಿದೆ. ಒಂದು ವೇಳೆ ಸಾಕ್ಷಿಯು ಮ್ಯಾಜಿಸ್ಟ್ರೇಟರ ಮುಂದೆ ನೀಡಿದ್ದ ಹೇಳಿಕೆಯಿಂದ ದೂರ ಸರಿದರೂ, ವಿಚಾರಣಾ ನ್ಯಾಯಾಲಯವು ಅವರು ಹಿಂದೆ ನೀಡಿದ್ದ ಹೇಳಿಕೆಯನ್ನು ಅವಲಂಬಿಸಬಹುದಾಗಿದೆ.







