ಸಂಪೂರ್ಣ ಕಣ್ಗಾವಲು ಹೊಂದಿದ ಪ್ರಪ್ರಥಮ ರೈಲಿಗೆ ಚಾಲನೆ
ಹೊಸದಿಲ್ಲಿ,ಎ.8: ರೈಲ್ವೆ ಇಲಾಖೆಯು ಪ್ರಯಾಣಿಕರ....ನಿರ್ದಿಷ್ಟವಾಗಿ ಮಹಿಳಾ ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸಲು ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇದರ ಅಂಗವಾಗಿ ಶಾನ್-ಎ-ಪಂಜಾಬ್ ಎಕ್ಸ್‌ಪ್ರೆಸ್ ತನ್ನ ಎಲ್ಲ ಬೋಗಿಗಳಲ್ಲಿಯೂ ಸಿಸಿಟಿವಿ ಕ್ಯಾಮರಾಗಳನ್ನು ಹೊಂದಿರುವ ದೇಶದ ಮೊದಲ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಶುಕ್ರವಾರ ದಿಲ್ಲಿಯಿಂದ ವೀಡಿಯೊ ಕಾನ್ಫರೆನ್ಸ್ ಮೂಲಕ ಅಮೃತಸರ ನಿಲ್ದಾಣದಲ್ಲಿ ಈ ರೈಲಿಗೆ ಹಸಿರು ನಿಶಾನೆ ತೋರಿಸಿದ ರೈಲ್ವೆ ಸಚಿವ ಸುರೇಶ ಪ್ರಭು ಅವರು, ಇದರೊಂದಿಗೆ ಮುಂಗಡ ಪತ್ರ ಭರವಸೆಯನ್ನು ಈಡೇರಿಸಿದ್ದೇವೆ ಎಂದು ಹೇಳಿದರು.
ಶಾನ್-ಎ-ಪಂಜಾಬ್‌ನ ಮಹಿಳೆಯರ ಕಂಪಾರ್ಟ್‌ಮೆಂಟ್‌ಗಳು ಸೇರಿದಂತೆ ಎಲ್ಲ 21 ಬೋಗಿಗಳಲ್ಲಿ ಅಂದಾಜು 36 ಲಕ್ಷ ರೂ.ವೆಚ್ಚದಲ್ಲಿ ಸುಮಾರು 122 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.
ಎಲ್ಲ ಬಾಗಿಲುಗಳಲ್ಲಿ ಆಯಕಟ್ಟಿನ ಜಾಗಗಳಲ್ಲಿ ಈ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಪ್ರಯಾಣಿಕರ ಖಾಸಗಿತನಕ್ಕೆ ಭಂಗವುಂಟಾಗದಂತೆ ಕಾಳಜಿ ವಹಿಸಲಾಗಿದೆ ಎಂದ ಪ್ರಭು, ಹಲವಾರು ನಿಲ್ದಾಣಗಳಲ್ಲಿಯೂ ಭದ್ರತಾ ವ್ಯವಸ್ಥೆಗಳನ್ನು ಹೆಚ್ಚಿಸಲಾಗುತ್ತಿದೆ ಎಂದರು.
ಹೊಸದಿಲ್ಲಿ-ಅಮೃತಸರ ನಡುವೆ ಸಂಚರಿಸುವ ಶಾನ್-ಎ-ಪಂಜಾಬ್ ರೈಲಿನ ಗಾರ್ಡ್‌ನ ಕಂಪಾರ್ಟ್‌ಮೆಂಟ್‌ನಲ್ಲಿ ಎಲ್‌ಸಿಡಿ ಟಿವಿಯನ್ನು ಅಳವಡಿಸಲಾಗಿದ್ದು, ಇಲ್ಲಿಂದ ಮಹಿಳಾ ಕಂಪಾರ್ಟ್‌ಮೆಂಟ್‌ಗಳಲ್ಲಿಯ ಸಿಸಿಟಿವಿ ಫೂಟೇಜ್‌ಗಳನ್ನು ವೀಕ್ಷಿಸಿ ತಕ್ಷಣದ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು.
ರೈಲ್ವೆಯು ಶೀಘ್ರವೇ ಇನ್ನಷ್ಟು ರೈಲುಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಿದೆ.







