ಯುಗಾದಿಗೆ ಬಿಜೆಪಿ ಗಾದಿ: ಯಡಿಯೂರಪ್ಪ ಪಕ್ಷದ ರಾಜ್ಯಾಧ್ಯಕ್ಷ

ಬೆಂಗಳೂರು, ಎ.8: ರಾಜ್ಯ ಬಿಜೆಪಿಯ ಸಾರಥ್ಯವು ನಿರೀಕ್ಷೆಯಂತೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಿ.ಎಸ್.ಯಡಿಯೂರಪ್ಪ ಪಾಲಾಗಿದೆ. ರಾಜ್ಯಾಧ್ಯಕ್ಷರ ನೇಮಕಕ್ಕೆ ಸಂಬಂಧಿಸಿದಂತೆ ಹಲವಾರು ದಿನಗಳಿಂದ ಮೂಡಿದ್ದ ಗೊಂದಲಕ್ಕೆ ಬಿಜೆಪಿ ಹೈಕಮಾಂಡ್ ‘ಯುಗಾದಿ’ ಹಬ್ಬದಂದು ತೆರೆ ಎಳೆದಿದೆ.
ರಾಜ್ಯ ಬಿಜೆಪಿ ಅಧ್ಯಕ್ಷರಾಗಿರುವ ಪ್ರಹ್ಲಾದ್‌ಜೋಶಿ ಅವರ ಅಧಿಕಾರಾವಧಿಯು ಕಳೆದ ಮಾ.24ರಂದು ಮುಕ್ತಾಯಗೊಂಡಿತ್ತು. ಅಧ್ಯಕ್ಷರಾಗಿ ಮತ್ತೊಂದು ಅವಧಿಗೆ ಮುಂದುವರಿಯಲು ಜೋಶಿ ತೆರೆಮರೆಯ ಕಸರತ್ತು ನಡೆಸಿದ್ದರಾದರೂ, ಬಿಜೆಪಿ ಹೈಕಮಾಂಡ್ 2018ರ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟು ಕೊಂಡು ಯಡಿಯೂರಪ್ಪಗೆ ಮಣೆ ಹಾಕಿದೆ.
ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿರುವ ಯಡಿಯೂರಪ್ಪ ರಾಜ್ಯ ರಾಜಕಾರಣದತ್ತ ಒಲವು ಹೊಂದಿದ್ದರು. ಪದೇ ಪದೇ ರಾಜ್ಯ ರಾಜಕಾರಣದಲ್ಲಿ ಸಕ್ರಿಯವಾಗುವುದಾಗಿ ಪಕ್ಷದ ನಾಯಕತ್ವದ ಮುಂದೆ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದರು. ಅಂತಿಮವಾಗಿ ಯಡಿಯೂರಪ್ಪ ಪಟ್ಟಿಗೆ ಬಿಜೆಪಿ ಹೈಕಮಾಂಡ್ ಮಣಿದಿದೆ.
ಭ್ರಷ್ಟಾಚಾರ, ಸ್ವಜನ ಪಕ್ಷಪಾತದ ಆರೋಪದಿಂದಾಗಿ ಯಡಿಯೂರಪ್ಪ ಈ ಹಿಂದೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿತ್ತು. ಅಲ್ಲದೆ, ಕೆಲಕಾಲ ಜೈಲು ವಾಸವನ್ನು ಅನುಭವಿಸಬೇಕಾಯಿತು. ಇದೀಗ ರಾಜ್ಯ ಹೈಕೋರ್ಟ್ ಯಡಿಯೂರಪ್ಪ ವಿರುದ್ಧದ ಬಹುಪಾಲು ಎಲ್ಲ ಪ್ರಕರಣಗಳನ್ನು ವಜಾಗೊಳಿಸಿರುವುದರಿಂದ ಬಿಜೆಪಿ ರಾಷ್ಟ್ರೀಯ ನಾಯಕರು ಯಡಿಯೂರಪ್ಪಗೆ ಮತ್ತೊಂದು ಅವಕಾಶವನ್ನು ಕಲ್ಪಿಸಿದ್ದಾರೆ.
ಬಿಜೆಪಿ ಪಾಳಯದಲ್ಲಿ ಸಂಭ್ರಮ: 2008ರಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದ ಯಡಿಯೂರಪ್ಪಗೆ ಬಿಜೆಪಿ ಹೈಕಮಾಂಡ್ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಬಿಜೆಪಿ ಕಾರ್ಯಕರ್ತರಲ್ಲಿ ಸಂಭ್ರಮ ಮನೆಮಾಡುವಂತಾಗಿದೆ.
ರಾಜ್ಯ ಬಿಜೆಪಿಯಲ್ಲಿ ಅತ್ಯಂತ ವರ್ಚಸ್ವಿ ನಾಯಕರಾಗಿರುವ ಯಡಿಯೂರಪ್ಪ ರಾಜ್ಯಾಧ್ಯಕ್ಷರಾಗಿರುವುದರಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹೆಚ್ಚಿನಅನುಕೂಲವಾಗುವ ಸಾಧ್ಯತೆಗಳಿವೆ ಎಂದು ಬಿಜೆಪಿ ನಾಯಕರು ಸಂಭ್ರಮಪಡುತ್ತಿದ್ದಾರೆ.
ಪಕ್ಷವನ್ನು ಅಧಿಕಾರಕ್ಕೆ ತರುವುದೇ ನನ್ನ ಗುರಿ: ಯಡಿಯೂರಪ್ಪ
ಹೊಸದಿಲ್ಲಿ, ಎ.8: ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿ ಸರಕಾರವನ್ನು ಅಧಿಕಾರಕ್ಕೆ ತರುವುದೇ ತನ್ನ ಏಕಮಾತ್ರ ಗುರಿಯಾಗಿದೆ ಎಂದು ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಶುಕ್ರವಾರ ಹೊಸದಿಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಭ್ರಷ್ಟ ಸರಕಾರವನ್ನು ಕಿತ್ತೊಗೆಯಬೇಕಾಗಿದೆ. ಒಂದು ದಿನವೂ ವಿಶ್ರಾಂತಿ ತೆಗೆದುಕೊಳ್ಳದೆ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಸಂಘಟಿಸುತ್ತೇನೆ ಎಂದರು.
ರಾಜ್ಯದಲ್ಲಿ ತೀವ್ರ ಬರಗಾಲವಿದೆ. ಕುಡಿಯುವ ನೀರಿನ ಸಮಸ್ಯೆ, ವಿದ್ಯುತ್ ಸಮಸ್ಯೆ ತೀವ್ರವಾಗಿದೆ. ಸರಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಮುಖ್ಯಮಂತ್ರಿ ಹಾಗೂ ಸಚಿವರ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿವೆ. ಈ ಸರಕಾರ ತನ್ನ ಅವಧಿಯನ್ನು ಪೂರೈಸುವುದು ಅನುಮಾನ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಬಿಜೆಪಿ ಒಂದು ಕೋಟಿ ಸದಸ್ಯರನ್ನು ಹೊಂದಿದೆ. ಬಲವಾದ ಸಂಘಟನಾ ಶಕ್ತಿಯನ್ನು ಹೊಂದಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯುತ್ತೇನೆ. ಬಹುಮತದೊಂದಿಗೆ ಪಕ್ಷವನ್ನು ಅಧಿಕಾರಕ್ಕೆ ತರುತ್ತೇನೆ ಎಂದು ಯಡಿಯೂರಪ್ಪ ತಿಳಿಸಿದರು.
ಪ್ರಧಾನಿ ನರೇಂದ್ರಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ಶಾ ಸೇರಿದಂತೆ ಇನ್ನಿತರ ಪ್ರಮುಖ ನಾಯಕರು ನನ್ನ ಮೇಲೆ ನಂಬಿಕೆಯಿಟ್ಟು ಆಶೀರ್ವಾದ ಮಾಡಿರುವುದಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನನಗೆ ಅನೇಕ ಕಹಿ ಅನುಭವಗಳೂ ಆಗಿವೆ. ಎಲ್ಲವನ್ನೂ ಮರೆತು ಮುಂದುವರಿಯುತ್ತೇನೆ ಎಂದು ಅವರು ಹೇಳಿದರು.
ತನ್ನ ವಿರುದ್ಧ ಉದ್ದೇಶಪೂರ್ವಕವಾಗಿ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಈಗಾಗಲೇ ಬಹುತೇಕ ಪ್ರಕರಣಗಳಿಂದ ಖುಲಾಸೆಗೊಂಡಿದ್ದೇನೆ. ಇನ್ನೆರಡು ಪ್ರಕರಣಗಳು ಬಾಕಿಯಿದ್ದು, ಅವುಗಳಿಂದ ಹೊರಗೆ ಬರುತ್ತೇನೆ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಹಲವರಿಗೆ ನಿರಾಸೆ: ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕಾಗಿ ಕಸರತ್ತು ನಡೆಸಿದ್ದ ಸಿ.ಟಿ.ರವಿ, ಆರ್.ಅಶೋಕ್ , ನಳಿನ್‌ಕುಮಾರ್ ಕಟೀಲ್, ಅನಂತ್‌ಕುಮಾರ್ ಹೆಗಡೆ ಇನ್ನಿತರರು ನಿರಾಸೆ ಅನುಭವಿಸುವಂತಾಗಿದೆ.
ಇದೇ ವೇಳೆ ಬಿಜೆಪಿ 13 ಉಪಾಧ್ಯಕ್ಷರು, 9 ಪ್ರಧಾನ ಕಾರ್ಯದರ್ಶಿಗಳು ಮತ್ತು 15 ಕಾರ್ಯದರ್ಶಿಗಳನ್ನೂ ಹೊಸದಾಗಿ ನೇಮಕ ಮಾಡಿದೆ. 2019ರಲ್ಲಿ ನಡೆಯಲಿರುವ ಚುನಾವಣೆಯನ್ನು ದೃಷ್ಟಿಯಲ್ಲಿ ಇರಿಸಿಕೊಂಡು ರಾಷ್ಟ್ರೀಯ ಬಿಜೆಪಿ ಈ ಬದಲಾವಣೆ ಮಾಡಿದ್ದು, ನೂತನ ಪಕ್ಷಾಧ್ಯಕ್ಷರುಗಳಿಗೆ ಪಕ್ಷಸಂಘಟನೆಯನ್ನು ಬಲಪಡಿಸಲು ಸೂಚನೆ ನೀಡಿದೆ ಎನ್ನಲಾಗಿದೆ.
ಯಡಿಯೂರಪ್ಪ ಆಯ್ಕೆ ನಿರೀಕ್ಷಿತ: ಪ್ರಹ್ಲಾದ್‌ಜೋಶಿ
ರಾಜ್ಯ ಬಿಜೆಪಿಗೆ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷರಾಗುವುದು ನಿರೀಕ್ಷಿತವಾಗಿತ್ತು. ಅದರಂತೆ, ಪಕ್ಷದ ಹೈಕಮಾಂಡ್ ಇಂದು ತನ್ನ ನಿರ್ಧಾರವನ್ನು ಪ್ರಕಟಿಸಿದೆ. ಸಾಮಾನ್ಯ ಕಾರ್ಯಕರ್ತನಾಗಿ ಅವರ ನಾಯಕತ್ವದಲ್ಲಿ ಪಕ್ಷದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತೇನೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
- ಪ್ರಹ್ಲಾದ್‌ಜೋಶಿ, ನಿಗರ್ಮಿತ ಬಿಜೆಪಿ ರಾಜ್ಯಾಧ್ಯಕ್ಷ







