ಐಪಿಎಲ್: ಮೊದಲೆರಡು ವಾರ ಯುವರಾಜ್ ಅಲಭ್ಯ
ಹೈದರಾಬಾದ್, ಎ.8: ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ವೇಳೆ ಮಂಡಿನೋವಿಗೆ ತುತ್ತಾಗಿದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡದ ಆಲ್‌ರೌಂಡರ್ ಯುವರಾಜ್ ಸಿಂಗ್ ಗಾಯದಿಂದ ಇನ್ನೂ ಸಂಪೂರ್ಣ ಚೇತರಿಸಿಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಅವರು ಐಪಿಎಲ್‌ನಲ್ಲಿ ಮೊದಲೆರಡು ವಾರಗಳ ಕಾಲ ಆಡುವುದಿಲ್ಲ.
ಭಾರತದ ಸೀಮಿತ ಓವರ್‌ಗಳ ಸ್ಪೆಷಲಿಸ್ಟ್ ಯುವರಾಜ್ ಆಸ್ಟ್ರೇಲಿಯ ವಿರುದ್ಧದ ಅಂತಿಮ ಲೀಗ್ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ ಗಾಯಗೊಂಡಿದ್ದರು. ಯುವರಾಜ್ ಕೆಲವು ವಾರಗಳ ಕಾಲ ಸಕ್ರಿಯ ಕ್ರಿಕೆಟ್‌ನಿಂದ ದೂರ ಉಳಿದಿರುವುದು ಬೇಸರದ ವಿಷಯ.
ಆದರೆ, ಅವರಿಗೆ ಸಂಪೂರ್ಣ ಚೇತರಿಸಿಕೊಳ್ಳಲು ಎಷ್ಟು ದಿನಗಳು ಬೇಕಾಗುತ್ತವೆ ಎಂದು ಗೊತ್ತಿಲ್ಲ. ಯುವರಾಜ್‌ರಂತಹ ಆಟಗಾರರು ಎಲ್ಲ ತಂಡಗಳಿಗೂ ಅತ್ಯಂತ ಮುಖ್ಯ. ಅವರು ಬ್ಯಾಟಿಂಗ್‌ನ ಮೂಲಕ ಮ್ಯಾಚ್ ವಿನ್ನರ್ ಮಾತ್ರವಲ್ಲ ಮಧ್ಯಮ ಓವರ್‌ನಲ್ಲಿ ಉಪಯುಕ್ತ ಬೌಲರ್ ಆಗಿದ್ದಾರೆ. ನಮ್ಮ ಮಧ್ಯಮ ಕ್ರಮಾಂಕವನ್ನು ಬಲಿಷ್ಠಗೊಳಿಸುವ ಉದ್ದೇಶದಿಂದ ಹರಾಜಿನಲ್ಲಿ ಅವರನ್ನು ತಂಡಕ್ಕೆ ಆಯ್ಕೆ ಮಾಡಿದ್ದೇವೆ ಎಂದು ಸನ್‌ರೈಸರ್ಸ್ ಹೈದರಾಬಾದ್ ತಂಡದ ಕೋಚ್ ಟಾಮ್ ಮೂಡಿ ಹೇಳಿದ್ದಾರೆ.





