ಮೂಡುಬಿದಿರೆ: ವಿದ್ಯಾರ್ಥಿಗೆ ತಂಡದಿಂದ ಹಲ್ಲೆ
ಮೂಡುಬಿದಿರೆ, ಎ.8: ವಿದ್ಯಾರ್ಥಿನಿಯನ್ನು ಚುಡಾಯಿಸಿದ್ದಾರೆಂಬ ಆರೋಪದಲ್ಲಿ ಹುಡುಗಿಯ ಸಹೋದರ ಮತ್ತವರ ತಂಡ ವಿದ್ಯಾರ್ಥಿಯೋರ್ವನಿಗೆ ಹಲ್ಲೆ ನಡೆಸಿದ ಘಟನೆ ಎಸ್‌ಎನ್‌ಎಂ ಪಾಲಿಟೆಕ್ನಿಕ್ ಆವರಣದ ಬಳಿ ಗುರುವಾರ ಮಧ್ಯಾಹ್ನ ನಡೆದಿದೆ.
ಹಲ್ಲೆಗೊಳಗಾದ ವಿದ್ಯಾರ್ಥಿಯನ್ನು ಶಾಶ್ವತ್ ಎಂದು ಗುರುತಿಸಲಾಗಿದೆ. ಗುರುವಾರ ಮಧ್ಯಾಹ್ನ ಪಾಲಿಟೆಕ್ನಿಕ್ ಕಾಲೇಜಿನ ದ್ವಿತೀಯ ಕಂಪ್ಯೂಟರ್ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯೋರ್ವಳು ತರಗತಿಯಿಂದ ಹೊರಗೆ ಬರುತ್ತಿದ್ದಾಗ ಕಟ್ಟೆಯಲ್ಲಿ ಕುಳಿತಿದ್ದ ವಿದ್ಯಾರ್ಥಿಯೋರ್ವ ಚುಡಾಯಿಸಿದ್ದ ಎನ್ನಲಾಗಿದ್ದು, ಈ ಬಗ್ಗೆ ವಿದ್ಯಾರ್ಥಿನಿ ತನ್ನ ಸಹೋದರ ಸೂರಜ್ ಎಂಬವರಿಗೆ ಕರೆ ಮಾಡಿ ದೂರು ನೀಡಿದ್ದಳು.
ಮಧ್ಯಾಹ್ನ ಸುಮಾರು 2:30ರ ವೇಳೆಗೆ ವಿದ್ಯಾರ್ಥಿನಿಯ ಸಹೋದರ ಸೂರಜ್ ಆತನ ಸ್ನೇಹಿತರಾದ ನಿತೇಶ್ ಮತ್ತು ಸಂದೀಪ್ ಜೊತೆ ಕಾಲೇಜು ಆವರಣಕ್ಕೆ ಬಂದರೆನ್ನಲಾಗಿದೆ. ಎದುರುಗಡೆ ಗೇಟ್ ಎದುರು ನಿಂತಿದ್ದ ವಿಘ್ನೇಶ್‌ನಲ್ಲಿ ಅಕ್ಷಯ್ ಅಂದರೆ ಯಾರು, ಅವನೆಲ್ಲಿ ಎಂದು ತಲವಾರು ಝಳಪಿಸಿ ಕೇಳಿದ್ದಾರೆ ಎನ್ನಲಾಗಿದೆ. ಈ ವೇಳೆ ಪಕ್ಕದಲ್ಲಿದ್ದ ಶಾಶ್ವತ್ ಎಂಬಾತ ಅಕ್ಷಯ್ ಯಾಕೆ ಎಂದು ಪ್ರಶ್ನಿಸಿದ್ದಕ್ಕೆ ಸಿಟ್ಟಾದ ತಂಡ ಶಾಶ್ವತ್‌ಗೆ ಹಲ್ಲೆ ನಡೆಸಿದೆ ಎನ್ನಲಾಗಿದೆ. ಮೂಡುಬಿದಿರೆ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.







