ಮಾತಿಗೆ ಕಡಿವಾಣ ಹಾಕದಿದ್ದಲ್ಲಿ ಜನ್ಮ ಜಾಲಾಡುವೆ: ಬಿಎಸ್‌ವೈಗೆ ಪೂಜಾರಿ ಎಚ್ಚರಿಕೆ

ಮಂಗಳೂರು, ಎ.9: ಆಡಳಿತ ಸರಕಾರವನ್ನು ಕಿತ್ತೊಗೆಯುವ, ರಾಜ್ಯವನ್ನು ಕಾಂಗ್ರೆಸ್‌ಮುಕ್ತಮಾಡುವ ಬಗ್ಗೆ ರಾಜ್ಯ ಬಿಜೆಪಿಯ ನೂತನ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾತನಾಡಿದ್ದಾರೆ. ಆದರೆ ಅವರ ಜನ್ಮದಲ್ಲಿ ಇದು ಅಸಾಧ್ಯ. ಅವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದು, ಮಾತಿಗೆ ಕಡಿವಾಣ ಹಾಕದಿದ್ದರೆ ನಾವು ಅವರ ಜನ್ಮ ಜಾಲಾಡುತ್ತೇವೆ ಎಂದು ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಮಾತಾಡಲು ಎಲ್ಲರಿಗೂ ಹಕ್ಕಿದೆ, ಆದರೆ ಬಾಯಿಗೆ ಬಂದಂತೆ ಮಾತಾಡಬಾರದು. ಮಾತಿಗೆ ಕಡಿವಾಣ ಹಾಕದಿದ್ದಲ್ಲಿ ಅವರ ಜನ್ಮ ಜಾಲಾಡಬೇಕಾಗುತ್ತದೆ ಎಂದರು.
ಯಡಿಯೂರಪ್ಪರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬಿಜೆಪಿಯ ಆಂತರಿಕ ವಿಚಾರ. ಆದರೆ ಅವರ ವಿರುದ್ಧ ಈಗಲೂ ಆರೋಪವಿದೆ. ಅವರ ಭ್ರಷ್ಟಾಚಾರದಿಂದಾಗಿಯೇ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಿದ್ದು. ಪ್ರೇರಣಾ ಟ್ರಸ್ಟ್‌ಗೆ 40 ಲಕ್ಷ ರೂ. ನೀಡಿದ್ದು ಸೇರಿದಂತೆ ಹಲವು ಪ್ರಕರಣಗಳಲ್ಲಿ ಅವರಿಗೆ ಕ್ಲೀನ್‌ಚಿಟ್ ಸಿಕ್ಕಿಲ್ಲ. ಭೂಹಗರಣದಲ್ಲೂ ಅವರ ಗಂಭೀರ ಆರೋಪ ಇದೆ. ಇಷ್ಟೆಲ್ಲ ಆರೋಪಗಳ ಸುಳಿಯಲ್ಲಿ ಸಿಲುಕಿಕೊಂಡಿರುವ ಅವರು ಅಧಿಕಾರದ ಕನಸು ಕಾಣುತ್ತಿದ್ದರೆ, ಅದು ತಿರುಕನ ಕನಸಷ್ಟೇ ಎಂದು ಪೂಜಾರಿ ವ್ಯಂಗ್ಯವಾಡಿದರು.
*ಬರ ಪ್ರದೇಶಕ್ಕೆ ಭೇಟಿ ನೀಡಿ: ಸಿಎಂಗೆ ಒತ್ತಾಯ
ರಾಜ್ಯಾದ್ಯಂತ ಬರಗಾಲ ತಲೆದೋರಿದೆ. ಇದರಿಂದ ಪಾರಾಗುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಯವರನ್ನು ಒತ್ತಾಯಿಸಿದ ಜನಾರ್ದನ ಪೂಜಾರಿ, ವೀಡಿಯೊ ಕಾನ್ಫರೆನ್ಸ್ ಮೂಲಕ ಅಧಿಕಾರಿಗಳಿಗೆ ಸೂಚನೆ ನೀಡುವುದನ್ನು ನಿಲ್ಲಿಸಿ. ಬರಗಾಲ ಪ್ರದೇಶಕ್ಕೆ ವೈಯಕ್ತಿಕವಾಗಿ ಭೇಟಿ ನೀಡಿ ಪರಿಶೀಲಿಸುವಂತೆ ಸಲಹೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಜೆ.ಆರ್.ಲೋಬೊ ಮತ್ತಿತರರು ಉಪಸ್ಥಿತರಿದ್ದರು





