ವಲಸಿಗರಿಗೆ ಇನ್ನೊಂದು ಕ್ಷೇತ್ರದಲ್ಲಿ ನಿಷೇಧ , ತಪ್ಪಿದರೆ ಭಾರೀ ಶಿಕ್ಷೆ
ಸೌದಿ ಸಂಕಟ

ರಿಯಾದ್ : ಸೌದೀಕರಣದ ನಿಟ್ಟಿನಲ್ಲಿ ಇನ್ನೊಂದು ಹೆಜ್ಜೆ ಮುಂದಿಡಲುಇಲ್ಲಿನ ಸರಕಾರ ಸಜ್ಜಾಗಿದ್ದು, ಖಾಸಗಿ ರಂಗದ ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗಗಳಲ್ಲಿ ಸೌದಿಯೇತರರನ್ನು ನೇಮಿಸುವುದನ್ನು ನಿಷೇಧಿಸುವ ನಿಟ್ಟಿನಲ್ಲಿ ಕಾರ್ಮಿಕ ಸಚಿವಾಲಯ ಕ್ರಮ ಕೈಗೊಳ್ಳಲಿದೆ. ನಿಷೇಧ ಜಾರಿಗೊಂಡ ನಂತರ ಈ ನಿಯಮದ ಉಲ್ಲಂಘಕರಿಗೆ ಕಠಿಣ ಶಿಕ್ಷೆ ವಿಧಿಸುವ ಬಗ್ಗೆಯೂ ಯೋಚಿಸಲಾಗುತ್ತಿದ್ದು, ಪ್ರತಿಯೊಂದು ನಿಯಮ ಉಲ್ಲಂಘನೆಯ ಪ್ರಕರಣಕ್ಕೂ 20,000 ಸೌದಿ ರಿಯಾಲ್ ದಂಡ ವಿಧಿಸಲಾಗುವುದು ಎಂದು ಅರಬ್ ನ್ಯೂಸ್ ವರದಿ ಮಾಡಿದೆ
ಈ ನಿಟ್ಟಿನಲ್ಲಿ ಕರಡು ಕಾನೂನೊಂದು ಸಿದ್ಧವಾಗಿದ್ದು ಸೌದಿಯೇತರರಿಗೆ ಮಾನವ ಸಂಪನ್ಮೂಲ ವಿಭಾಗದಲ್ಲಿ ಯಾವುದೇ ನೌಕರಿ ನೀಡದಂತೆಎಚ್ಚರಿಸಲಾಗಿದೆ. ಈ ಕರಡನ್ನು ಸಚಿವಾಲಯದ ವೆಬ್ ತಾಣದಲ್ಲಿ ಪ್ರಕಟಿಸಲಾಗಿದ್ದು, ಉದ್ಯಮಿಗಳು ಈ ಬಗ್ಗೆ ತಮ್ಮ ಪ್ರತಿಕ್ರಿಯೆ ನೀಡಬಹುದಾಗಿದೆ. ಯಾವುದೇ ಅಭಿಪ್ರಾಯವನ್ನು ಮುಂದಿನ 20 ದಿನಗಳೊಳಗಾಗಿ ಸಲ್ಲಿಸಬೇಕಾಗಿದ್ದು ನಂತರ ಈ ಕಾನೂನು ಜಾರಿಗೆ ಬರಲಿದೆ.
ಮಾನವ ಸಂಪನ್ಮೂಲ ವಿಭಾಗಗಳ ಎಲ್ಲಾ ಉದ್ಯೋಗಗಳನ್ನೂ ಸೌದಿಗಳಿಗೇ ಮೀಸಲಾಗಿರಿಸುವುದು ಹಾಗೂ ಸೌದಿಯೇತರರಿಗೆ ನೇರವಾಗಿ ಹಾಗೂ ಪರೋಕ್ಷವಾಗಿ ಯಾವುದೇ ಉದ್ಯೋಗ ನೀಡುವುದನ್ನು ತಡೆಯುವುದು ಈ ಕ್ರಮದ ಹಿಂದಿನ ಮುಖ್ಯ ಉದ್ದೇಶವೆಂದು ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.





