ಟ್ರಂಪ್, ಕ್ರೂಝ್ ತನ್ನ ಡೆಮಕ್ರಾಟ್ ಪಕ್ಷಕ್ಕೆ ಸಹಾಯ ಮಾಡುತ್ತಿದ್ದಾರೆ: ಬರಾಕ್ ಒಬಾಮ

ಸ್ಯಾನ್‌ಫ್ರಾನ್ಸಿಸ್ಕೊ, ಎಪ್ರಿಲ್.9: ರಿಪಬ್ಲಿಕನ್ ಪಾರ್ಟಿಯ ಅಧ್ಯಕ್ಷೀಯ ಉಮೇದ್ವಾರಿಕೆಯ ಅಭ್ಯರ್ಥಿಗಳಾದ ಡೊನಾಲ್ಡ್ ಟ್ರಂಪ್‌ಮತ್ತು ಟೆಡ್ ಕ್ರೂಝ್ ವಲಸೆ ಮತ್ತು ರಾಷ್ಟ್ರೀಯ ಭದ್ರತೆ ಕುರಿತ ತೀವ್ರವಾದಿ ವಿಚಾರಗಳನ್ನು ಬಹಿರಂಗ ಪಡಿಸುತ್ತಿದ್ದು ಇದು ಡೆಮಕ್ರಾಟಿಕ್ ಪಕ್ಷಕ್ಕೆ ಸಹಾಯವೇ ಆಗಲಿದೆ ಎಂದು ಅಮೆರಿಕ ಅಧ್ಯಕ್ಷ ಒಬಾಮ ಹೇಳಿದ್ದಾರೆಂದು ವರದಿಯಾಗಿದೆ.
’ಮುಸ್ಲಿಮರು ಮತ್ತು ಮೆಕ್ಸಿಕೊದ ನಾಗರಿಕರನ್ನು ದೇಶ ಪ್ರವೇಶಿಸದಂತೆ ತಡೆಯಬೇಕೆಂಬ’ ಟ್ರಂಪ್‌ರ ಹೇಳಿಕೆಯನ್ನು ಉದ್ಧರಿಸಿದ ಒಬಾಮ " ನನಗೆ ಡೊನಾಲ್ಡ್ ಟ್ರಂಪ್ ಮತ್ತು ಟೆಡ್ ಕ್ರೂಝ್ ಈ ರೀತಿಯ ಹೇಳಿಕೆಗಳನ್ನು ನೀಡುವ ಮೂಲಕ ನಮ್ಮ ಹಿತಕ್ಕಾಗಿ ಅವರು ಕೆಲಸ ಮಾಡುತ್ತಿದ್ದಾರೆ ಎಂದು ನಿಜವಾಗಿಯೂ ಅನಿಸುತ್ತಿದೆ. ರಾಷ್ಟ್ರೀಯ ಸುರಕ್ಷೆ ಮತ್ತು ವಲಸೆಯಂತಹ ಇತರ ವಿಚಾರಗಳಲ್ಲಿಯೂ ಅವರ ಉಗ್ರ ಹೇಳಿಕೆಗಳು ಡೆಮಕ್ರಾಟಿಕ್ ಪಾರ್ಟಿಗೆ ಲಾಭವನ್ನೇ ಮಾಡಲಿದೆ" ಎಂದು ತನ್ನ ಅಭಿಪ್ರಾಯವನ್ನು ಪಕ್ಷದ ನಿಧಿ ಸಂಗ್ರಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಒಬಾಮ ವ್ಯಕ್ತಪಡಿಸಿದ್ದಾರೆ.
ನವೆಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಾರ್ಟಿಯಿಂದ ಟ್ರಂಪ್ ಮತ್ತು ಕ್ರೂರ್ ಎರಡು ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ. ಅವರ ಆಕ್ರಮಣಕಾರಿ ನಿಲುವು ಮತ್ತು ಬಂಡಾಯವಾದಿ ಪ್ರಚಾರ ಅಭಿಯಾನದಿಂದಾಗಿ ಅವರದ್ದೇ ಪಕ್ಷದ ನಾಯಕರಿಗೆ ನಿರಾಸೆಯುಂಟಾಗಿದೆ ಎಂದು ಒಬಾಮರು ಹೇಳಿದ್ದಾರೆ. ಮುಂದಿನ ಹತ್ತು ತಿಂಗಳ ನಂತರ ತಾನು ಅಮೆರಿಕದ ಅಧ್ಯಕ್ಷನಾಗಿರುವುದಿಲ್ಲ ಆದರೆ ಟ್ರಂಪ್‌ರ ವಿಚಾರಗಳಿಗೆ ವಿರುದ್ಧವಾಗಿ ಅಮೆರಿಕದ ಜನರಿದ್ದಾರೆ ಎಂದು ಒಬಾಮ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅದೇ ವೇಳೆ ಟ್ರಂಪ್ ತನ್ನ ಪ್ರಚಾರ ಅಭಿಯಾನದಲ್ಲಿ ಹಲವು ಸಲ ಒಬಾಮರನ್ನು ಹವಾಯಿಯಲ್ಲಿ ಜನಿಸಿದವರು. ಅಮೆರಿಕದಲ್ಲಿ ಜನಿಸಿದವರಲ್ಲ ಎಂದು ಹೇಳಿರುವುದಾಗಿ ವರದಿಗಳು ತಿಳಿಸಿವೆ.







